ಆಸ್ಟ್ರೇಲಿಯಾ ಪರ 1 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನು ಆಡಿದ್ದ ನ್ಯಾನಸ್, ನೆದರ್‌'ಲೆಂಡ್ಸ್ ಪರವೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ವಿಶ್ವದಾದ್ಯಂತ ಟಿ20 ಲೀಗ್‌'ನಲ್ಲಿ ಆಡಿರುವ ಅವರು, ಐಪಿಎಲ್‌'ನ ಕೆಲ ಆವೃತ್ತಿಗಳಲ್ಲಿ ಆರ್‌'ಸಿಬಿ ಹಾಗೂ ಸಿಎಸ್'ಕೆ ತಂಡಗಳನ್ನೂ ಪ್ರತಿನಿಧಿಸಿದ್ದರು.

ಸಿಡ್ನಿ(ಡಿ.16): ಆ್ಯಷಸ್ ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಯತ್ನ ನಡೆದಿದೆ ಎನ್ನುವ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ವೇಗಿ ಡರ್ಕ್ ನ್ಯಾನಸ್ ಸ್ಫೋಟಕ ರಹಸ್ಯಗಳನ್ನು ಬಹಿರಂಗಗೊಳಿಸಿದ್ದಾರೆ.

‘ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌'ನಲ್ಲಿ ಸ್ಪಾಟ್ ಫಿಕ್ಸಿಂಗ್ ಸಾಮಾನ್ಯ. ನಾನೇ ಕಣ್ಣಾರೆ ನೋಡಿದ್ದೇನೆ’ ಎನ್ನುವ ಆರೋಪವನ್ನು ನ್ಯಾನಸ್ ಮಾಡಿದ್ದು, ಕ್ರಿಕೆಟ್ ಜಗತ್ತು ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಶುಕ್ರವಾರ ಆಸ್ಟ್ರೇಲಿಯಾದ ‘ಎಬಿಸಿ ರೇಡಿಯೋ’ ಜತೆ ಮಾತನಾಡಿದ ನ್ಯಾನಸ್ ‘ನಾನು ಬಾಂಗ್ಲಾ ಪ್ರೀಮಿಯರ್ ಲೀಗ್‌'ನಲ್ಲಿ ಆಡುವಾಗ, ತಂಡದ ಮಾಲೀಕರು ಮೈದಾನಕ್ಕೆ ಆಗಮಿಸುತ್ತಿದ್ದರು. ಮಾಲೀಕರಿಗೆ ಮೈದಾನದೊಳಕ್ಕೆ ಪ್ರವೇಶವಿಲ್ಲ. ಆದರೆ ತಂಡದ ವ್ಯವಸ್ಥಾಪಕನ ಮೂಲಕ ಕೋಚ್'ಗಳಿಂದ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತ್ತಿದ್ದರು. ಟಾಸ್ ಗೆದ್ದರೆ ತಂಡ ಏನು ಮಾಡಲಿದೆ, ತಂಡದ ರಣತಂತ್ರಗಳೇನು ಎನ್ನುವ ಮಾಹಿತಿಯನ್ನು ಕೇಳಿಕೊಂಡು ಮಾಲೀಕರಿಗೆ ತಿಳಿಸುತ್ತಿದ್ದರು. ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿದರೂ ಏನೂ ತಿಳಿಯದಂತೆ ಸುಮ್ಮನಿರುತ್ತಿದ್ದರು’ ಎಂದು ನ್ಯಾನಸ್ ಹೇಳಿದ್ದಾರೆ.

ಬಿಪಿಎಲ್‌'ನಲ್ಲಿ ಸೈಲೆಟ್ ರಾಯಲ್ಸ್ ತಂಡದ ಪರ ಆಡಿದ್ದ ನ್ಯಾನಸ್, ‘ಮಾಲೀಕರು ತಾವು ತಂಡದ ಖರೀದಿಸಿರುವುದೇ ಹಣ ಮಾಡುವುದಕ್ಕಾಗಿ ಎಂದು ಹೇಳಿದ್ದನ್ನು ನಾನು ಕೇಳಿಕೊಂಡಿದ್ದೇನೆ’ ಎಂದಿದ್ದಾರೆ. ‘ಮೈದಾನದಲ್ಲಿರುವ ಪ್ರತಿ ಆಟಗಾರರಿಗೂ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಇರುತ್ತಿತ್ತು. ಯಾವ ಓವರ್ ಫಿಕ್ಸ್ ಆಗಿದೆ, ತಂಡಗಳ ಮುಂದಿನ ನಡೆಯೇನು ಎನ್ನುವ ಬಗ್ಗೆಯೂ ಗೊತ್ತಿರುತ್ತಿತ್ತು’ ಎಂದು ನ್ಯಾನಸ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪರ 1 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನು ಆಡಿದ್ದ ನ್ಯಾನಸ್, ನೆದರ್‌'ಲೆಂಡ್ಸ್ ಪರವೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ವಿಶ್ವದಾದ್ಯಂತ ಟಿ20 ಲೀಗ್‌'ನಲ್ಲಿ ಆಡಿರುವ ಅವರು, ಐಪಿಎಲ್‌'ನ ಕೆಲ ಆವೃತ್ತಿಗಳಲ್ಲಿ ಆರ್‌'ಸಿಬಿ ಹಾಗೂ ಸಿಎಸ್'ಕೆ ತಂಡಗಳನ್ನೂ ಪ್ರತಿನಿಧಿಸಿದ್ದರು.