ನವದೆಹಲಿ(ಸೆ.14): ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್'ಗೂ ರಾಜಿನಾಮೆಯನ್ನು ಬಿಸಿಸಿಐ ಕೇಳಿತ್ತು ಎಂಬ ಮಾತುಗಳಿಗೀಗ ಮತ್ತಷ್ಟು ಪುಷ್ಠಿ ಬಂದಂತಾಗಿದೆ.

ಭಾರತ ಆಯ್ಕೆ ಸಮಿತಿಯ ಮುಖ್ಯಸ್ಥ ಸಂದೀಪ್ ಪಾಟೀಲ್ ಮುಂಬರುವ ನ್ಯೂಜಿಲೆಂಡ್ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ನಂತರ ಸುದ್ದಿಗಾರರಿಂದ ಸಾಕಷ್ಟು ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿಬಂತು.

ಈ ವೇಳೆ ಪತ್ರಕರ್ತರಿಂದ, ಸಚಿನ್ ಅವರಿಗೂ ಬಿಸಿಸಿಐ ರಾಜಿನಾಮೆ ನೀಡುವಂತೆ ಒತ್ತಡ ಹೇರಿತ್ತಾ ಎಂಬ ಪ್ರಶ್ನೆಗೆ 'ಆಯ್ಕೆ ಸಮಿತಿ ಹಾಗೂ ಬಿಸಿಸಿಐ ನಡುವಿನ ಕೆಲವೊಂದು ವಿಚಾರಗಳನ್ನು ಗೌಪ್ಯವಾಗಿಡಬೇಕಾಗುತ್ತದೆ' ಎಂದು ಚುಟುಕಾಗಿ ಪಾಟೀಲ್ ಉತ್ತರಿಸಿದರು.

2013ರಲ್ಲಿ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧ ಮಾಸ್ಟರ್ ಬ್ಲಾಸ್ಟರ್'ಗೆ ವಿದಾಯದ ಟೆಸ್ಟ್ ಸರಣಿ ಏರ್ಪಡಿಸಿ ಗೌರವಯುತವಾಗಿ ಬೀಳ್ಕೊಡಲಾಗಿತ್ತು.

ನಾವು ಭಾರತ ಕ್ರಿಕೆಟ್ ತಂಡದ ಭವಿಷ್ಯದ ದೃಷ್ಟಿಯಿಂದ ಕೆಲವೊಮ್ಮೆ ಕಷ್ಟಕರವಾದರೂ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರಿಂದ ತಂಡಕ್ಕೆ ಒಳಿತಾಗಿದೆ. ತಂಡವು ಮೂರು ವಿಭಾಗದಲ್ಲೂ ಅತ್ಯತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸ ತಂದಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.