ನವದೆಹಲಿ[ಮಾ.26]: ಶಿಖರ್ ಧವನ್ ಆಕರ್ಷಕ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್’ಗಳಲ್ಲಿ 147 ರನ್ ಬಾರಿಸಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಧವನ್-ಪೃಥ್ವಿ ಶಾ 36 ರನ್’ಗಳ ಜತೆಯಾಟ ನಿಭಾಯಿಸಿತು. ಆ ಬಳಿಕ ಧವನ್ ಕೂಡಿಕೊಂಡ ನಾಯಕ ಶ್ರೇಯಸ್ ಅಯ್ಯರ್ ತಂಡದ ಮೊತ್ತವನ್ನು 80ರ ಸಮೀಪ ಕೊಂಡ್ಯೊಯ್ದರು. ಉತ್ತಮವಾಗಿ ಆಡುತ್ತಿದ್ದ ಅಯ್ಯರ್ 18 ರನ್ ಬಾರಿಸಿ ಇಮ್ರಾನ್ ತಾಹಿರ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಅಬ್ಬರಿಸಿದ ಪಂತ್ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 15.2 ಓವರ್’ನಲ್ಲಿ 120 ರನ್ ಬಾರಿಸಿದ್ದ ಡೆಲ್ಲಿ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಕೇವಲ 7 ರನ್ ಬಾರಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ಧವನ್ 47 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 51 ರನ್ ಬಾರಿಸಿ ಬ್ರಾವೋಗೆ ಮೂರನೇ ಬಲಿಯಾದರು. ಕೊನೆಯಲ್ಲಿ ರಾಹುಲ್ ತೆವಾಟಿಯ 11 ರನ್ ಬಾರಿಸುವ ಮೂಲಕ 150ರ ಸಮೀಪ ಕೊಂಡ್ಯೊಯ್ದರು.

ಚೆನ್ನೈ ಪರ ಡ್ವೇನ್ ಬ್ರಾವೋ 3 ವಿಕೆಟ್ ಪಡೆದರೆ, ದೀಪಕ್ ಚಹಾರ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್: 147/6
ಶಿಖರ್ ಧವನ್: 51
ಡ್ವೇನ್ ಬ್ರಾವೋ: 33/3

[* ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]