IPL ಹರಾಜು ನಿಷೇಧಿಸಲು ಆಗ್ರಹಿಸಿದವನಿಗೆ 25 ಸಾವಿರ ದಂಡ!
IPL ಟೂರ್ನಿಯ ಹರಾಜು ಪ್ರಕ್ರಿಯೆ ನಿಷೇಧಿಸಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರನಿಗೆ ಕೋರ್ಟ್ ಶಾಕ್ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಹೈಕೋರ್ಟ್ ಚಾಟಿ ಬೀಸಿದ್ದೇಕೆ? ಇಲ್ಲಿದೆ ವಿವರ.
ನವದೆಹಲಿ(ಜು.26): ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿಗೆ ಪರ-ವಿರೋಧಗಳಿವೆ. ಇನ್ನು ಐಪಿಎಲ್ ಟೂರ್ನಿ ಕೂಡ ಹಲವು ವಿವಾದಕ್ಕೆ ಗುರಿಯಾಗಿದೆ. ಇದೀಗ ಐಪಿಎಲ್ ಟೂರ್ನಿಯಲ್ಲಿನ ಆಟಗಾರರ ಹರಾಜು ಪ್ರಕ್ರಿಯೆ ನಿಷೇಧಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಿದ ಅರ್ಜಿದಾರನಿಗೆ ದೆಹಲಿಯ ಹೈಕೋರ್ಟ್ ಶಾಕ್ ನೀಡಿದೆ. ನಿಷೇಧಕ್ಕಾಗಿ PIL ಸಲ್ಲಿಸಿದ ಅರ್ಜಿದಾರನಿಗೆ ಕೋರ್ಟ್ 25,000 ರೂಪಾಯಿ ದಂಡ ಹಾಕಿದೆ.
ಐಪಿಎಲ್ ಆಟಗಾರರ ಆಕ್ಷನ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದು ಮಾನವ ಕಳ್ಳಸಾಗಾಣಿಕೆಯಾಗಿದೆ. ಹಣದಲ್ಲಿ ಆಟಗಾರರನ್ನು ಖರೀದಿಸುವ ಮಾದರಿ ಸರಿಯಿಲ್ಲ. ಹರಾಜು ಪ್ರಕ್ರಿಯೆ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಹೀಗಾಗಿ ಐಪಿಎಲ್ ಹರಾಜು ನಿಷೇಧಿಸಿ ಎಂದು ಅರ್ಜಿದಾರ ಸುಧೀರ್ ಶರ್ಮಾ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಮುಖ್ಯನಾಯಮೂರ್ತಿ ಡಿಎನ್ ಪಟೇಲ್ ಹಾಗೂ ನ್ಯಾಯಮೂರ್ತಿ ಸಿ ಹರಿ ಶಂಕರ್ ಒಳಗೊಂಡ ಪೀಠ ಸುಧೀರ್ ಶರ್ಮಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದೆ. ಇಷ್ಟೇ ಅಲ್ಲ ಸುಧೀರ್ ಶರ್ಮಾ ಸಲ್ಲಿಸಿರುವ PILನಲ್ಲಿ ಯಾವುದೇ ಹುರುಳಿಲ್ಲ. ಸುಧೀರ್ ಪ್ರಚಾರಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಂಡಿದ್ದಾರೆ ಎಂದು 25,000 ರೂಪಾಯಿ ದಂಡ ಹಾಕಲಾಗಿದೆ.