ಚೆನ್ನೈ(ಮಾ.21): 12ನೇ ಆವೃತ್ತಿ ಐಪಿಎಲ್ ಟೂರ್ನಿ ಮಾ.23 ರಿಂದ ಆರಂಭಗೊಳ್ಳುತ್ತಿದೆ. ಉದ್ಘಾಟಾನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ CSK ಉದ್ಘಾಟನಾ ಪಂದ್ಯದ ಸಂಪೂರ್ಣ ಆದಾಯವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿದೆ.

ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

CSK vs RCB ನಡುವಿನ ಮೊದಲ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ. ಟಿಕೆಟ್ ಮಾರಾಟದ ಹಣ ಸೇರಿದಂತೆ ಮೊದಲ ಪಂದ್ಯದ ಎಲ್ಲಾ ಆದಾಯ ಕೂಡ ಹುತಾತ್ಮ ಕುಟುಂಬಕ್ಕೆ ನೀಡುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ ಈ ಹಣವನ್ನು CSK ನಾಯಕ, ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಎಂ.ಎಸ್.ಧೋನಿ ಚೆಕ್ ಮೂಲಕ ವಿತರಿಸಲಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019: ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ ಕಿಂಗ್ಸ್ XI ಪಂಜಾಬ್ ನೆರವು!

ಈಗಾಗಲೇ ಬಿಸಿಸಿಐ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ ಈ ಹಣವನ್ನು ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ ನೀಡಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 25 ಲಕ್ಷ ರೂಪಾಯಿ ಹಣದ ನೆರವನ್ನು ನೀಡಿದೆ. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬದ ಜೊತೆಗೆ ನಾವಿದ್ದೇವೆ ಅನ್ನೋ ಸಂದೇಶವನ್ನೂ ಸಾರಿದೆ.

ಫೆಬ್ರವರಿ 14 ರಂದು CRPF ಯೋಧರ ಮೇಲೆ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಬಾಂಬ್ ದಾಳಿ ಮಾಡಿತ್ತು. ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ನಡೆದ ರಣಭೀಕರ ದಾಳಿಯಲ್ಲಿ 40ಕ್ಕೂ ಹೆಚ್ಚು   CRPF ಯೋಧರು ಹುತಾತ್ಮರಾಗಿದ್ದರು.