ಬೆಂಗಳೂರು: ಕ್ರಿಕೆಟ್’ನಲ್ಲಿ ಬೌಲರ್’ಗಳನ್ನು ಬ್ಯಾಟ್ಸ್’ಮನ್’ಗಳ ವಿಕೆಟ್ ಕಬಳಿಸುವುದು ಸಾಮಾನ್ಯ. ಕೆಲವೊಮ್ಮೆ ಕ್ಷೇತ್ರರಕ್ಷಕರೂ ತಮ್ಮ ಚಾಣಾಕ್ಷ ಫೀಲ್ಡಿಂಗ್ ಮೂಲಕ ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗೆ ಅಟ್ಟುತ್ತಾರೆ. ಅದರಲ್ಲೂ ಜಾಂಟಿ ರೋಡ್ಸ್, ಎಬಿ ಡಿವಿಲಿಯರ್ಸ್, ರಿಕಿ ಪಾಂಟಿಂಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಅವರಂತಹ ಫೀಲ್ಡರ್ ಅದ್ಭುತ ಕ್ಯಾಚ್ ಹಾಗೂ ವಿಕೆಟ್’ಗೆ ನಿಖರ ಥ್ರೋ ಮಾಡುವ ಮೂಲಕ ಬ್ಯಾಟ್ಸ್’ಮನ್’ಗಳನ್ನು ಬಲಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಫೀಲ್ಡರ್’ಗಳ ಚಾಣಾಕ್ಷ ಕ್ಷೇತ್ರ ರಕ್ಷಣೆಯಿಂದಾಗಿ ರನೌಟ್ ಆದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ... 

5. ಇಂಜಾಮಾಮ್ ಉಲ್ ಹಕ್(PAK) - 46
ಕ್ರೀಸ್ ಮಧ್ಯೆ ಓಡುವುದರಲ್ಲಿ ಕೊಂಚ ಮಂದವಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅತಿ ಹೆಚ್ಚುಬಾರಿ ರನೌಟ್ ಆದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಒಂದು-ಎರಡು ರನ್ ಆರಿಸುವುದಕ್ಕಿಂತ ಬೌಂಡರಿ ಹಾಗೂ ಸಿಕ್ಸರ್’ಗಳ ಮೂಲಕವೇ ಹೆಚ್ಚು ರನ್ ಕಲೆಹಾಕುತ್ತಿದ್ದ ಇಂಜಿ, ಹಲವಾರು ಬಾರಿ ಕ್ರೀಸ್’ನಲ್ಲಿ ರನ್ ಕದಿಯುವಾಗ ಗೊಂದಲಕ್ಕೊಳಗಾಗಿ ರನೌಟ್ ಆಗುತ್ತಿದ್ದರು.

4. ರಿಕಿ ಪಾಂಟಿಂಗ್(Aus) 47
ಅತಿಹೆಚ್ಚು ಬಾರಿ ರನೌಟ್ ಆದ ಆಟಗಾರರ ಪಟ್ಟಿಯಲ್ಲಿ ಸ್ಥಾನಪಡೆದ ಏಕೈಕ ಏಷ್ಯಾ ಹೊರತಾದ ಕ್ರಿಕೆಟಿಗರೆಂದರೆ ಅದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್. ಆಸೀಸ್ ಪರ ಮೂರನೇ ಕ್ರಮಾಂಕದಲ್ಲಿ ಸುಮಾರು ಎರಡು ದಶಕಗಳ ಕಾಲ ಕಣಕ್ಕಿಳಿಯುತ್ತಿದ್ದ ಪಾಂಟಿಂಗ್ ಎದುರಾಳಿ ತಂಡದ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಮ್ಯಾಥ್ಯೂ ಹೇಡನ್, ಆ್ಯಡಂ ಗಿಲ್’ಕ್ರಿಸ್ಟ್, ಜಸ್ಟಿನ್ ಲ್ಯಾಂಗರ್ ಜತೆ ಸಾಕಷ್ಟು ಸ್ಮರಣೀಯ ಇನ್ನಿಂಗ್ಸ್ ಕಟ್ಟಿದ್ದ ಪಾಂಟಿಂಗ್ 47 ಬಾರಿ ರನೌಟ್ ಆಗಿರುವುದೇ ಅಚ್ಚರಿಯ ವಿಚಾರ. 

3. ಮರ್ವನ್ ಅಟಪಟ್ಟು(SL)- 48
ಶ್ರೀಲಂಕಾ ತಂಡದ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್’ಮನ್’ಗಳಲ್ಲಿ ಮರ್ವನ್ ಅಟಪಟ್ಟು ಕೂಡಾ ಒಬ್ಬರು. ಟೆಸ್ಟ್ ಕ್ರಿಕೆಟ್’ನಲ್ಲಿ 6 ದ್ವಿಶತಕ ಹಾಗೂ ಏಕದಿನ ಕ್ರಿಕೆಟ್’ನಲ್ಲಿ 8500ಕ್ಕೂ ಹೆಚ್ಚು ರನ್ ಬಾರಿಸಿರುವ ಅಟಪಟ್ಟು ರನ್ ಓಡುವುದರಲ್ಲಿ ಕೊಂಚ ಆಲಸ್ಯ ತೋರುತ್ತಿದ್ದರು. ಹೀಗಾಗಿಯೇ ಅಟಪಟ್ಟು ಸುಮಾರು 48 ಬಾರಿ ರನೌಟ್ ಆಗಿ ಪೆವಿಲಿಯನ್ ಸೇರಿದ್ದರು.

2. ಮಹೇಲಾ ಜಯವರ್ಧನೆ(SL)- 51
ಅತಿಹೆಚ್ಚು ರನೌಟ್ ಆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವುದು ಶ್ರೀಲಂಕಾದ ಮತ್ತೋರ್ವ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದ ಮಹೇಲಾ ರನ್ ಕದಿಯುವುದರಲ್ಲಿ ಕೊಂಚ ವೀಕ್ ಆಗಿದ್ದರು. ಕ್ರಿಕೆಟ್’ಗೆ ಗುಡ್’ಬೈ ಹೇಳುವ ಮುನ್ನ ಮಹೇಲಾ ಒಟ್ಟು 51 ಬಾರಿ ರನೌಟ್ ಆಗಿದ್ದರು.

1. ರಾಹುಲ್ ದ್ರಾವಿಡ್[IND)- 53
ಅತಿಹೆಚ್ಚು ಬಾರಿ ರನೌಟ್ ಆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಆಟಗಾರ ’ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಅತ್ಯಂತ ನಂಬಿಕಸ್ಥ ಬ್ಯಾಟ್ಸ್’ಮನ್ ಆಗಿ ಗುರುತಿಸಿಕೊಂಡಿದ್ದ ದ್ರಾವಿಡ್, ರನ್ ಕದಿಯುವ ವಿಚಾರದಲ್ಲಿ ಸ್ವಲ್ಪ ಸ್ಲೋ ಆಗಿರುತ್ತಿದ್ದರು. ದ್ರಾವಿಡ್ ಒಟ್ಟು 53 ಬಾರಿ ರನೌಟ್ ಆಗುವ ಮೂಲಕ ಅತಿಹೆಚ್ಚು ಬಾರಿ ರನೌಟ್’ಗೆ ಒಳಗಾದ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದಾರೆ.