ನೆಗೊಂಬೋ[ಏ.24]: ಲಂಕಾದಲ್ಲಿ ನಡೆದ ಸ್ಫೋಟ ಪ್ರಕರಣ ಕೆಲವರನ್ನು ಹುಡುಕಿ ಹುಡುಕಿ ಜೀವ ಪಡೆದಿದ್ದರೆ, ಇನ್ನು ಕೆಲವರನ್ನು ನಾನಾ ಕಾರಣಗಳಿಂದ ಕಾಪಾಡಿದೆ. ಇಂಥದ್ದೊಂಕು ಉದಾಹರಣೆ ಲಂಕಾ ಕ್ರಿಕೆಟಿಗ ದಸುನ್‌ ಶನಕಾ. ತೀರಾ ದಣಿವಾಗಿದ್ದ ಕಾರಣಕ್ಕೆ ಭಾನುವಾರ ಚಚ್‌ರ್‍ಗೆ ತೆರಳುವುದರಿಂದ ಹಿಂದೆ ಸರಿದ ಶನಕಾ, ಇದೇ ಕಾರಣದಿಂದಾಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಜೊತೆಗೆ ದಾಳಿಯ ಭೀಕರತೆಗೆ ಕಣ್ಣಾರೆ ಕಂಡ ಅವರೀಗ ಅಕ್ಷರಶಃ ಥಂಡಾ ಹೊಡೆದಿದ್ದಾರೆ. ಅಲ್ಲದೆ, ಮನೆಯಿಂದ ಹೊರಗೆ ಹೋಗಲು ಸಹ ಅವರು ಹೆದರುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಕ್ರಿಕ್‌ಇಸ್ಫೋ ಜೊತೆ ಮಾತನಾಡಿದ 27 ವರ್ಷದ ಉದಯೋನ್ಮುಖ ಕ್ರಿಕೆಟರ್‌ ಶನಕಾ ಅವರು, ‘ಸಾಮಾನ್ಯವಾಗಿ ನಾನು ಸೇಂಟ್‌ ಸೆಬಾಸ್ಟಿಯಾನ್‌ ಚಚ್‌ರ್‍ಗೆ ಹೋಗುತ್ತಿದ್ದೆ. ಆದರೆ, ಈಸ್ಟರ್‌ ಆದ ಭಾನುವಾರದಂದು ತುಂಬಾ ಸುಸ್ತಾಗಿದ್ದರಿಂದಾಗಿ ಹೋಗಿರಲಿಲ್ಲ. ಅಂದು ಮುಂಜಾನೆ ನಾನು ಮನೆಯಲ್ಲಿದ್ದಾಗ ದೊಡ್ಡದಾದ ಸದ್ದು ಕಿವಿಗೆ ಬಿತ್ತು. ಚಚ್‌ರ್‍ನಲ್ಲಿ ಬಾಂಬ್‌ ಸ್ಫೋಟವಾಯಿತು ಎಂದು ಜನರು ಕಿರುಚಿಕೊಂಡು ದಿಕ್ಕಾಪಾಲಾಗಿ ಓಡುತ್ತಿದ್ದರು. ಈ ವೇಳೆ ಚಚ್‌ರ್‍ಗೆ ಹೋಗಿದ್ದ ಅಮ್ಮ ಮತ್ತು ಅಜ್ಜಿಯನ್ನು ನೋಡಲು ನಾನು ಸಹ ಚಚ್‌ರ್‍ನತ್ತ ದೌಡಾಯಿಸಿದೆ.

ಈ ವೇಳೆ ಅಲ್ಲಿ ಕಂಡ ಚಿತ್ರಣವನ್ನು ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ. ಬಾಂಬ್‌ ದಾಳಿಗೆ ಚಚ್‌ರ್‍ ಸಂಪೂರ್ಣ ಧ್ವಂಸಗೊಂಡಿತ್ತು. ಪ್ರಾಣ ಕಳೆದುಕೊಂಡ ಮೃತದೇಹಗಳನ್ನು ಹಲವರು ಧರಧರನೆ ಎಳೆದು ಹೊರಕ್ಕೆ ಹಾಕುತ್ತಿದ್ದರು. ಈ ಸನ್ನಿವೇಶವನ್ನು ಕಂಡ ಯಾರೇ ಆಗಲಿ, ಚಚ್‌ರ್‍ನಲ್ಲಿದ್ದವರು ಯಾರೂ ಸಹ ಬದುಕುಳಿದಿಲ್ಲ ಎಂಬುದನ್ನು ಹೇಳಬಹುದು,’ ಎಂದು ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದರು. ಅಲ್ಲದೆ, ಅದೃಷ್ಟಾವಶತ್‌ ಅಮ್ಮ ಮತ್ತು ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.