ಬೆಂಗಳೂರು(ಅ.20): ಟೀಂ ಇಂಡಿಯಾ ಕಂಡ ಸ್ಫೋಟಕ ಬ್ಯಾಟ್ಸ್‌ಮನ್, ದಾಖಲೆಗಳ ಸರದಾರ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಸೆಹ್ವಾಗ್‌ಗೆ ಹಾಲಿ, ಮಾಜಿ ಸೇರಿದಂತೆ ವಿಶ್ವ ದಿಗ್ಗಜರು ಶುಭಕೋರಿದ್ದಾರೆ.

ಬೌಲರ್ ಯಾರೇ ಆಗಿರಲಿ, ಎದುರಾಳಿ ಅದೆಷ್ಟೇ ಬಲಿಷ್ಠವಾಗಿರಲಿ, ಸೆಹ್ವಾಗ್ ಮಂತ್ರ ಒಂದೇ, ಪ್ರತಿ  ಎಸೆತವನ್ನೂ ಬೌಂಡರಿ ಗೆರೆ ದಾಟಿಸುವುದು. 1999ರಲ್ಲಿ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ ಸೆಹ್ವಾಗ್, 2001ರಲ್ಲಿ ಸೌತ್ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯೂ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಸೆಹ್ವಾಗ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ, 319 ರನ್ ಸಿಡಿಸೋ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯುಕ್ತಿಕ ಗರಿಷ್ಠ ರನ್ ಸಿಡಿಸಿದ ಭಾರತದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.

2011ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ 219 ರನ್ ಸಿಡಿಸೋ ಮೂಲಕ ಏಕದಿನ ಕ್ರಿಕೆಟ್‍‌ನಲ್ಲೂ ದ್ವಿಶತಕದ ಸಾಧನೆ ಮಾಡಿದರು. ಭಾರತದ ಪರ 104 ಟೆಸ್ಟ್ ಪಂದ್ಯದಿಂದ 8586 ರನ್ ಸಿಡಿಸಿದ್ದಾರೆ. 23 ಶತಕ ಹಾಗೂ 32 ಅರ್ಧಶತಕ ಭಾರಿಸಿದ್ದಾರೆ.

ಏಕದಿನದಲ್ಲಿ 251 ಪಂದ್ಯದಿಂದ 8273 ರನ್, 15 ಶತಕ, 38 ಅರ್ಧಶತಕ ಸಿಡಿಸಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಸೆಹ್ವಾಗ್, ಟ್ವಿಟರ್ ಮೂಲಕವೇ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದಾರೆ. ಇದೀಗ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೆಹ್ವಾಗ್‌ಗೆ ಹ್ಯಾಪಿ ಬರ್ತ್ ಡೇ.