ಕ್ರಿಕೆಟ್ ಇತಿಹಾಸದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜೂನ್ 17ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.
ಬೆಂಗಳೂರು(ಜೂ.17): ಕ್ರಿಕೆಟ್ ದುನಿಯಾದಲ್ಲಿ ಸೌತ್ಆಫ್ರಿಕಾ ಬಲಿಷ್ಠ ತಂಡ. ಆದರೆ ವಿಶ್ವಕಪ್ ಸೇರಿದಂತೆ ಪ್ರಮುಖ ಸರಣಿಗಳ ಅಂತಿಮ ಹಂತದಲ್ಲಿ ಸೌತ್ಆಫ್ರಿಕಾ ಎಡವಿ ಬಿದ್ದಿದೆ. ಹೀಗಾಗಿಯೇ ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್ ಪಟ್ಟ ಬಂದಿದೆ. ಆದರೆ ಚೋಕರ್ಸ್ ಹಣೆಪಟ್ಟಿ ಬಂದಿದ್ದು ಇದೇ ದಿನ. ಅಂದರೆ ಜೂನ್ 17, 1999.
ಅದು 1999ರ ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯ. ಸೌತ್ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಿತ್ತು. ಆಸ್ಟೇಲಿಯಾ ತಂಡವನ್ನ 213 ರನ್‌ಗಳಿಗೆ ಆಲೌಟ್ ಮಾಡಿದ ಸೌತ್ಆಫ್ರಿಕಾ ಗುರಿ ಬೆನ್ನಟ್ಟೋ ವಿಶ್ವಾಸದಲ್ಲಿತ್ತು. ರೋಚಕ ಹೋರಾಟ ಅಂತಿಮ ಓವರ್‌ಗೆ ತಲುಪಿದಾಗ ಸೌತ್ಆಫ್ರಿಕಾ ಗೆಲುವಿಗೆ 9 ರನ್‌ಗಳ ಅವಶ್ಯಕತೆ ಇತ್ತು. ಆದರೆ 9 ವಿಕೆಟ್ ಉರುಳಿಬಿದ್ದಿತ್ತು.
ಅಂತಿಮ ಓವರ್‌ನ ಮೊದಲ ಹಾಗೂ 2ನೇ ಎಸೆತವನ್ನ ಲ್ಯಾನ್ಸ್ ಕ್ಲೂಸ್ನರ್ ಬೌಂಡರಿ ಗೆರೆ ದಾಟಿಸಿದರು. ಹೀಗಾಗಿ ಗೆಲುವಿಗೆ 4 ಎಸೆತದಲ್ಲಿ ಕೇವಲ 1 ರನ್ ಬೇಕಿತ್ತು. ಒಂದು ರನ್ ಕದಿಯಲು ಹೋದ ಕ್ಲೂಸ್ನರ್‌ಗೆ, ನಾನ್ ಸ್ಟ್ರೈಕ್‌ನಲ್ಲಿದ್ದ ಅಲನ್ ಡೋನಾಲ್ಡ್ ಸಾಥ್ ನೀಡಲಿಲ್ಲ. ಡೋನಾಲ್ಡ್ ರನೌಟ್‌ಗೆ ಬಲಿಯಾದರು. ಹೀಗಾಗಿ ಸೌತ್ಆಫ್ರಿಕಾ ವಿರೋಚಿತ ಸೋಲು ಕಂಡಿತು. ಇಲ್ಲಿಂದ ಸೌತ್ಆಫ್ರಿಕಾ ತಂಡಕ್ಕೆ ಚೋಕರ್ಸ್ ಹಣೆಪಟ್ಟಿ ಗಟ್ಟಿಯಾಗಿ ಅಂಟಿಕೊಂಡಿತು.
ಶೇನ್ ವ್ಯಾಟ್ಸನ್:

ಇದೇ ದಿನ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ವಿಶೇಷವಿದೆ. ಇದೇ ದಿನ ಆಸ್ಟ್ರೇಲಿಯಾ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಹುಟ್ಟಿದ ದಿನ. ಜೂನ್.17, 1981ರಲ್ಲಿ ಹುಟ್ಟಿದ ಶೇನ್ ವ್ಯಾಟ್ಸನ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೈನೆಸ್ಟ್ ಕ್ರಿಕೆಟರ್ ಅನ್ನೋ ಬಿರುದು ಪಡೆದಿದ್ದಾರೆ. ಆಸಿಸ್ ಪರ 190 ಏಕದಿನ ಪಂದ್ಯ ಆಡಿರು ವ್ಯಾಟ್ಸನ್ 5757 ರನ್ ಸಿಡಿಸಿದ್ದಾರೆ. ಟಿ-ಟ್ವೆಂಟಿಯಲ್ಲಿ 58 ಪಂದ್ಯಗಳಲ್ಲಿ 1468 ರನ್ ಬಾರಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿಲ್ಲ. 59 ಪಂದ್ಯಗಳಲ್ಲಿ 3731 ರನ್ ಸಿಡಿಸಿದ್ದಾರೆ. 2016 ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ವಿದಾಯ ಹೇಳಿದ ವ್ಯಾಟ್ಸನ್ ಇದೀಗ ಲೀಗ್ ಟೂರ್ನಿಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ವ್ಯಾಟ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
