201 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದ್ದ ವಿದರ್ಭಕ್ಕೆ ಶ್ರೀಕಾಂತ್‌ ವಾಘ್‌ (57) ಹಾಗೂ ಅಕ್ಷಯ್‌ ವಾಖರೆ (ಅಜೇಯ 35) ರನ್‌ ಆಸರೆಯಾದರು. ಲಲಿತ್‌ ಯಾದವ್‌ 14 ರನ್‌ಗಳ ಕೊಡುಗೆ ನೀಡಿದರು. ಕೊನೆ 2 ವಿಕೆಟ್‌ಗೆ ವಿದರ್ಭ 106 ರನ್‌ಗಳನ್ನು ಕಲೆಹಾಕಿತು. ಕರ್ನಾಟಕದ ಪರ ಜೆ.ಸುಚಿತ್‌ 4, ಅಭಿಮನ್ಯು ಮಿಥುನ್‌ 3 ಹಾಗೂ 100ನೇ ರಣಜಿ ಪಂದ್ಯವನ್ನಾಡುತ್ತಿರುವ ನಾಯಕ ವಿನಯ್‌ ಕುಮಾರ್‌ 2 ವಿಕೆಟ್‌ ಕಿತ್ತರು.

ನಾಗ್ಪುರ(ನ.14): ಹಾಲಿ ಚಾಂಪಿಯನ್‌ ವಿದರ್ಭ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ರನ್‌ ಬಿಟ್ಟುಕೊಟ್ಟ ಕರ್ನಾಟಕ, 2018-19ರ ಸಾಲಿನ ತನ್ನ ಆರಂಭಿಕ ಪಂದ್ಯದಲ್ಲಿ ಸಮಸ್ಯೆಗೆ ಸಿಲುಕಿದೆ. ಮೊದಲ ದಿನದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 245 ರನ್‌ ಗಳಿಸಿದ್ದ ವಿದರ್ಭ, ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್‌ ಗಳಿಸಿ ಆಲೌಟ್‌ ಆಯಿತು.

201 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದ್ದ ವಿದರ್ಭಕ್ಕೆ ಶ್ರೀಕಾಂತ್‌ ವಾಘ್‌ (57) ಹಾಗೂ ಅಕ್ಷಯ್‌ ವಾಖರೆ (ಅಜೇಯ 35) ರನ್‌ ಆಸರೆಯಾದರು. ಲಲಿತ್‌ ಯಾದವ್‌ 14 ರನ್‌ಗಳ ಕೊಡುಗೆ ನೀಡಿದರು. ಕೊನೆ 2 ವಿಕೆಟ್‌ಗೆ ವಿದರ್ಭ 106 ರನ್‌ಗಳನ್ನು ಕಲೆಹಾಕಿತು. ಕರ್ನಾಟಕದ ಪರ ಜೆ.ಸುಚಿತ್‌ 4, ಅಭಿಮನ್ಯು ಮಿಥುನ್‌ 3 ಹಾಗೂ 100ನೇ ರಣಜಿ ಪಂದ್ಯವನ್ನಾಡುತ್ತಿರುವ ನಾಯಕ ವಿನಯ್‌ ಕುಮಾರ್‌ 2 ವಿಕೆಟ್‌ ಕಿತ್ತರು.

ಎದುರಾಳಿಯನ್ನು ಕಳಪೆ ಮೊತ್ತಕ್ಕೆ ಕಟ್ಟಿಹಾಕುವ ಅವಕಾಶವಿದ್ದರೂ, ಕರ್ನಾಟಕದ ಬೌಲರ್‌ಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. 300ಕ್ಕೂ ಹೆಚ್ಚು ರನ್‌ ಕಲೆಹಾಕಿದ ವಿದರ್ಭ, ಆತ್ಮವಿಶ್ವಾಸದೊಂದಿಗೆ ಬೌಲಿಂಗ್‌ ಆರಂಭಿಸಿತು.

ಸಮರ್ಥ್’ಗೆ ನಿರಾಸೆ: ಮಯಾಂಕ್‌ ಅಗರ್‌ವಾಲ್‌, ಕೆ.ಎಲ್‌.ರಾಹುಲ್‌ರಂತಹ ಅನುಭವಿ ಆರಂಭಿಕರ ಅನುಪಸ್ಥಿತಿ, ಯುವ ಆಟಗಾರ ಆರ್‌.ಸಮಥ್‌ರ್‍ ಮೇಲೆ ಒತ್ತಡ ಹೆಚ್ಚಿಸಿತ್ತು. ಸಮಥ್‌ರ್‍ (01) 2ನೇ ಓವರ್‌ನಲ್ಲೇ ಔಟಾಗಿ ನಿರಾಸೆ ಅನುಭವಿಸಿದರು. ಅವರೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಡಿ.ನಿಶ್ಚಲ್‌, ಒಂದು ಬದಿಯಲ್ಲಿ ಕಲ್ಲುಬಂಡೆಯಂತೆ ನಿಂತರು.

ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೆ.ವಿ.ಸಿದ್ಧಾರ್ಥ್’ಗೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅವಕಾಶ ದೊರೆಯಿತು. ಆದರೆ ಸಿದ್ಧಾರ್ಥ್ (19) ಅವಕಾಶ ಬಳಸಿಕೊಳ್ಳಲಿಲ್ಲ. 3 ಬೌಂಡರಿಗಳೊಂದಿಗೆ 13 ಎಸೆತಗಳಲ್ಲಿ 15 ರನ್‌ ಗಳಿಸಿದ ಕರುಣ್‌ ನಾಯರ್‌ ಸಹ ಬೇಗನೆ ಪೆವಿಲಿಯನ್‌ ಸೇರಿಕೊಂಡರು.

54 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಕರ್ನಾಟಕ, ಸ್ಟುವರ್ಟ್‌ ಬಿನ್ನಿ(20) ರನ್‌ಗೆ ಔಟ್‌ ಆದ ಕಾರಣ, 87 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಯಿತು. ಯುವ ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ (30) 5ನೇ ವಿಕೆಟ್‌ಗೆ ನಿಶ್ಚಲ್‌ ಜತೆ ಕ್ರೀಸ್‌ ಹಂಚಿಕೊಂಡು 62 ರನ್‌ ಬಾರಿಸಿದರು. ಸಂಕಷ್ಟದಲ್ಲಿದ ಕರ್ನಾಟಕ, ಈ ಜೊತೆಯಾಟದಿಂದ ತಕ್ಕಮಟ್ಟಿಗೆ ಉಸಿರಾಡುವಂತಾಯಿತು.

ತಂಡದ ಮೊತ್ತ 150 ದಾಟುವ ಮೊದಲೇ 5 ವಿಕೆಟ್‌ ಕಳೆದುಕೊಂಡ ರಾಜ್ಯ ತಂಡ, ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮುನ್ನಡೆ ಬಿಟ್ಟುಕೊಡುವ ಭೀತಿಗೆ ಸಿಲುಕಿತು. ಆದರೆ 6ನೇ ವಿಕೆಟ್‌ಗೆ ನಿಶ್ಚಲ್‌ ಜತೆಯಾದ ಹೊಸ ಪ್ರತಿಭೆ ಬಿ.ಆರ್‌.ಶರತ್‌, ಕರ್ನಾಟಕ 200ರ ಗಡಿ ದಾಟಲು ಕಾರಣರಾದರು.

ನಿಶ್ಚಲ್‌ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿದರೆ, 9 ಬೌಂಡರಿಗಳನ್ನು ಬಾರಿಸಿ ಶರತ್‌ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. 209 ಎಸೆತಗಳನ್ನು ಎದುರಿಸಿ 66 ರನ್‌ ಗಳಿಸಿರುವ ನಿಶ್ಚಲ್‌ ಹಾಗೂ 76 ಎಸೆತಗಳಲ್ಲಿ 46 ರನ್‌ ಗಳಿಸಿರುವ ಶರತ್‌, 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಇನ್ನೂ 99 ರನ್‌ ಹಿನ್ನಡೆಯಲ್ಲಿದ್ದು, ಬುಧವಾರದ ಮೊದಲ ಅವಧಿ ಪಂದ್ಯದ ಫಲಿತಾಂಶ ನಿರ್ಧರಿಸುವ ನಿರೀಕ್ಷೆ ಇದೆ.

ಸಂಕ್ಷಿಪ್ತ ಸ್ಕೋರ್‌: ವಿದರ್ಭ 307/10 (ಶ್ರೀಕಾಂತ್‌ 57, ಸುಚಿತ್‌ 4-33, ಮಿಥುನ್‌ 3-53), ಕರ್ನಾಟಕ 208/5 (ನಿಶ್ಚಲ್‌ 66*, ಶರತ್‌ 46*, ಆದಿತ್ಯ 2-44)