ಮುಂಬೈ: ಅಚ್ಚರಿ ಹಾಗೂ ಅನಿರೀಕ್ಷಿತ ನಿರ್ಧಾರವೊಂದರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತದ ಟಿ20 ತಂಡದಿಂದ ಕೈಬಿಟ್ಟಿದೆ.

ನ.4ರಿಂದ ನಡೆಯಲಿರುವ ವಿಂಡೀಸ್ ವಿರುದ್ಧದ 3 ಟಿ20 ಪಂದ್ಯಗಳ ಸರಣಿ ಹಾಗೂ ತದ ನಂತರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಧೋನಿಯನ್ನು ಕೈಬಿಡಲಾಗಿದೆ. ತಂಡದ ಕಾಯಂ ಸದಸ್ಯರಾಗಿ ಸ್ಥಿರಗೊಂಡ ನಂತರ ಧೋನಿ ಅವರನ್ನು ಇದೇ ಮೊದಲ ಬಾರಿಗೆ ಭಾರತ ತಂಡದಿಂದ ಕೈಬಿಡಲಾಗಿದ್ದು, ಕ್ರಿಕೆಟ್ ಲೋಕದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದು ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಧೋನಿ ಭವಿಷ್ಯ ಅಂತ್ಯ ಎಂದೇ ಬಣ್ಣಿಸಲಾಗುತ್ತಿದೆ.  37ರ ಹರೆಯದ ಧೋನಿ, ಭಾರತದ ಪರ 93 ಟಿ20 ಪಂದ್ಯಗಳನ್ನಾಡಿದ್ದು, 37ರ ಸರಾಸರಿ ಹಾಗೂ 127ರ ಸ್ಟ್ರೈಕ್‌ರೇಟ್‌ನೊಂದಿಗೆ 1487 ರನ್ ಗಳಿಸಿದ್ದಾರೆ.

 

ಧೋನಿಗೆ ಇದು ದಿ ಎಂಡ್ ಅಲ್ಲ
ಭಾರತ ಆಡಲಿರುವ ಮುಂದಿನ 6 ಟಿ20 ಪಂದ್ಯಗಳಿಗೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆರಿಸಲಾಗಿದೆ. ಸುದೀರ್ಘ ಕಾಲದಿಂದ ಈ ಪಾತ್ರವನ್ನು ನಿರ್ವಹಿಸುತ್ತಿರುವ ಧೋನಿ ಅವರಿಗೊಂದು ಸೂಕ್ತ ಪರ್ಯಾಯ ಇರಬೇಕೆಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರರ್ಥ ಭಾರತ ಟಿ20 ತಂಡದಲ್ಲಿ ಧೋನಿ ಅವರ
ಯುಗ ಮುಗಿಯಿತು ಎಂದಲ್ಲ.
- ಎಂ.ಎಸ್.ಕೆ.ಪ್ರಸಾದ್, ಆಯ್ಕೆ ಸಮಿತಿ ಮುಖ್ಯಸ್ಥ

ವಿಂಡೀಸ್ ಟಿ20: ಕೊಹ್ಲಿಗೆ ರೆಸ್ಟ್, ರೋಹಿತ್ ನಾಯಕ

ಈ ಮಧ್ಯೆ, ನ.4ರಿಂದ ನ.11ರವರೆಗೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಟಿ20 ಪಂದ್ಯಗಳ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ತದ ನಂತರ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳ ಸಂದರ್ಭದಲ್ಲಿ ಕೊಹ್ಲಿ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ವಿಂಡೀಸ್ ಟಿ20ಗೆ ತಂಡ: ರೋಹಿತ್ (ನಾಯಕ), ಧವನ್, ರಾಹುಲ್, ಕಾರ್ತಿಕ್, ಪಾಂಡೆ, ಶ್ರೇಯಸ್ ಅಯ್ಯರ್, ಪಂತ್, ಕೃನಾಲ್, ವಾಷಿಂಗ್ಟನ್ ಸುಂದರ್, ಚೆಹಲ್, ಕುಲ್ದೀಪ್, ಭುವನೇಶ್ವರ್, ಬುಮ್ರಾ, ಖಲೀಲ್, ಉಮೇಶ್, ಶಾಬಾಜ್