ಮೆಲ್ಬರ್ನ್‌[ಮೇ.29]: ಜಿಂಬಾಬ್ವೆಯ ಮಾಜಿ ವೇಗದ ಬೌಲರ್‌ ಹೆನ್ರಿ ಒಲೋಂಗ ಕ್ರಿಕೆಟ್‌ ಅಭಿಮಾನಿಗಳಿಗೆ ನೆನಪಿರಬಹುದು. ರಾಜಕೀಯ ಕಾರಣಗಳಿಂದ 2003ರ ಏಕದಿನ ವಿಶ್ವಕಪ್‌ ಬಳಿಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಒಲೋಂಗ, ಇದೀಗ ದಿಢೀರ್‌ ಪ್ರತ್ಯಕ್ಷರಾಗಿದ್ದಾರೆ. 

ಮೇ 27ರಂದು ‘ದ ವಾಯ್ಸ್ ಆಸ್ಪ್ರೇಲಿಯಾ’ ಎನ್ನುವ ಸಂಗೀತ ಶೋನ ಆಡಿಷನ್‌ನಲ್ಲಿ ಒಲೋಂಗ ಕಾಣಿಸಿಕೊಂಡರು. ‘ದಿಸ್‌ ಈಸ್‌ ದ ಮೊಮೆಂಟ್‌’ ಎನ್ನುವ ಗೀತೆಯನ್ನು ಹಾಡುವ ಮೂಲಕ ತೀರ್ಪುಗಾರರ ಮನ ಸೆಳೆದ ಮಾಜಿ ವೇಗಿ, ಮುಂದಿನ ಸುತ್ತಿಗೂ ಅರ್ಹತೆ ಪಡೆದರು. ಒಲೋಂಗ ಹಾಡಿನ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಡರೆನ್‌ ಲೆಹ್ಮನ್‌, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಶಾನ್‌ ಪೊಲ್ಲಾಕ್‌ ಸೇರಿದಂತೆ ಹಲವು ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹಲವು ಬಾರಿ ಜೀವ ಬೆದರಿಕೆ ಎದುರಾದ ಕಾರಣ, ಜಿಂಬಾಬ್ವೆ ತೊರೆದು ಒಲೋಂಗ ಇಂಗ್ಲೆಂಡ್‌ಗೆ ವಲಸೆ ಹೋಗಿ 12 ವರ್ಷಗಳ ಕಾಲ ಅಲ್ಲಿ ನೆಲೆಸಿದ್ದರು. ಇತ್ತೀಚೆಗೆ ಆಸ್ಪ್ರೇಲಿಯಾಗೆ ಸ್ಥಳಾಂತರಗೊಂಡ ಅವರು ಅಡಿಲೇಡ್‌ನಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರಿಯರ ಜತೆ ವಾಸಿಸುತ್ತಿದ್ದಾರೆ. ಒಲೋಂಗ, ಜಿಂಬಾಬ್ವೆ ಪರ 30 ಟೆಸ್ಟ್‌ ಹಾಗೂ 50 ಏಕದಿನ ಪಂದ್ಯಗಳನ್ನು ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 126 ವಿಕೆಟ್‌ ಕಬಳಿಸಿದ್ದರು.