* ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಮೊದಲ ದಿನವೇ ಪದಕ ಖಾತೆ ತೆರೆಯುವ ನಿರೀಕ್ಷೆ* ಮೊದಲ ದಿನವೇ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ಮಹಿಳಾ ಹಾಕಿ ಹಾಗೂ ಕ್ರಿಕೆಟ್ ತಂಡ* ಮೊದಲ ದಿನವೇ ಭಾರತಕ್ಕೆ ಪದಕ ಖಾತೆ ತೆರೆಯುವ ಅವಕಾಶವಿದೆ  

ಬರ್ಮಿಂಗ್‌ಹ್ಯಾಮ್‌(ಜು.29): 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಗೇಮ್ಸ್‌ನ ಸ್ಪರ್ಧೆಗಳು ಶುಕ್ರವಾರದಿಂದ ಆರಂಭಗೊಳ್ಳಲಿದ್ದು ಮೊದಲ ದಿನವೇ ಭಾರತಕ್ಕೆ ಪದಕ ಖಾತೆ ತೆರೆಯುವ ಅವಕಾಶವಿದೆ. ಸೈಕ್ಲಿಂಗ್‌, ಈಜು, ಟ್ರಯಥ್ಲಾನ್‌ ಮತ್ತು ಜಿಮ್ನಾಸ್ಟಿಕ್ಸ್‌ ಕ್ರೀಡೆಗಳಲ್ಲಿ ಪದಕ ಸುತ್ತುಗಳು ನಡೆಯಲಿವೆ. ಪುರುಷರ ಟ್ರಯಥ್ಲಾನ್‌ನಲ್ಲಿ ಆದರ್ಶ್‌ ಎಂ.ಎಸ್‌, ವಿಶ್ವನಾಥ್‌ ಯಾದವ್‌, ಮಹಿಳೆಯರ ವಿಭಾಗದಲ್ಲಿ ಸಂಜನಾ ಜೋಶಿ, ಪ್ರಜ್ಞಾ ಮೋಹನ್‌ ಕಣಕ್ಕಿಳಿಯಲಿದ್ದಾರೆ. ಸೈಕ್ಲಿಂಗ್‌ ಪುರುಷರ ಪರ್ಸೂಟ್‌ ತಂಡ ವಿಭಾಗ, ಸ್ಟ್ರಿಂಟ್‌ ತಂಡ ವಿಭಾಗ, ಮಹಿಳೆಯರ ಸ್ಟ್ರಿಂಟ್‌ ತಂಡ ವಿಭಾಗಗಳಲ್ಲಿ ಭಾರತ ಸ್ಪರ್ಧಿಸಲಿದೆ.

ಇನ್ನು ಜಿಮ್ನಾಸ್ಟಿಕ್ಸ್‌ ತಂಡ ಆಲ್ರೌಂಡ್‌ ವಿಭಾಗದಲ್ಲಿ ಮೊದಲು ಅರ್ಹತಾ ಸುತ್ತು ನಡೆಯಲಿದ್ದು, ಫೈನಲ್‌ ಸಹ ಶುಕ್ರವಾರವೇ ನಿಗದಿಯಾಗಿದೆ. ಪುರುಷರ ಈಜು 400 ಮೀ. ಫ್ರೀ ಸ್ಟೈಲ್‌ನಲ್ಲಿ ಕುಶಾಗ್ರ ರಾವತ್‌ ಸ್ಪರ್ಧಿಸಲಿದ್ದು, ಫೈನಲ್‌ಗೆ ಪ್ರವೇಶಿಸುವ ನಿರೀಕ್ಷೆ ಇದೆ. ಇದೇ ವೇಳೆ 50 ಮೀ. ಬಟರ್‌ಫ್ಲೈ, 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಗಳಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್‌ ಸ್ಪರ್ಧಿಸಲಿದ್ದಾರೆ.

ಹರ್ಮನ್‌ ಪಡೆಗೆ ಆಸೀಸ್‌ ಸವಾಲು

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಟಿ20 ಕ್ರಿಕೆಟ್‌ ಸೇರ್ಪಡೆಗೊಳಿಸಲಾಗಿದ್ದು, ಭಾರತ ತಂಡಕ್ಕೆ ಮೊದಲ ಪಂದ್ಯದಲ್ಲಿ ಶುಕ್ರವಾರ ಬಲಿಷ್ಠ ಆಸ್ಪ್ರೇಲಿಯಾ ಎದುರಾಗಲಿದೆ. ‘ಎ’ ಗುಂಪಿನಲ್ಲಿರುವ ಭಾರತವು, ಜುಲೈ 31ಕ್ಕೆ ಪಾಕಿಸ್ತಾನ, ಆಗಸ್ಟ್‌ 3ಕ್ಕೆ ಬಾರ್ಬೊಡಾಸ್‌ ತಂಡಗಳನ್ನು ಎದುರಿಸಲಿದೆ.

Birmingham ಕಾಮನ್‌ವೆಲ್ತ್‌ ಗೇಮ್ಸ್‌ಗಿಂದು ಅದ್ದೂರಿ ಚಾಲನೆ

ಹಾಕಿ: ಭಾರತಕ್ಕೆ ಇಂದು ದುರ್ಬಲ ಘಾನಾ ಎದುರಾಳಿ

ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಪದಕ ಗೆಲ್ಲುವ ನಿರೀಕ್ಷೆ ಇದ್ದು, ಗುಂಪು ಹಂತದ ಮೊದಲ ಪಂದ್ಯದಲ್ಲಿ ಶುಕ್ರವಾರ ಘಾನಾ ಎದುರಾಗಲಿದೆ. ದೊಡ್ಡ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಸವಿತಾ ಪೂನಿಯಾ ಪಡೆ ಎದುರು ನೋಡುತ್ತಿದೆ. ಭಾರತಕ್ಕೆ ಜುಲೈ 30ರಂದು ವೇಲ್ಸ್‌, ಆಗಸ್ಟ್‌ 2ಕ್ಕೆ ಇಂಗ್ಲೆಂಡ್‌, ಆಗಸ್ಟ್‌ 3ಕ್ಕೆ ಕೆನಡಾ ಸವಾಲು ಎದುರಾಗಲಿದೆ.

ಕಾಮನ್ವೆಲ್ತ್‌: ಜುಡೋ ಪಟು ಜಸ್ಲೀನ್‌ ಸ್ಪರ್ಧೆಗೆ ಅನುಮತಿ

ನವದೆಹಲಿ: ಭಾರತದ ಜುಡೋ ಪಟು ಜಸ್ಲೀನ್‌ ಸಿಂಗ್‌ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ದೆಹಲಿ ಹೈಕೋರ್ಚ್‌ ಅನುಮತಿ ನೀಡಿದೆ. ತಮ್ಮ ವಿರುದ್ಧ ಕೇಳಿಬಂದಿದ್ದ ಅನುಚಿತ ವರ್ತನೆಯ ಆರೋಪಗಳಿಂದ ಜಸ್ಲೀನ್‌ ಸಿಂಗ್‌ ಮುಕ್ತರಾಗಿದ್ದಾರೆ. ಕಳೆದ ತಿಂಗಳು ಸ್ಪೇನ್‌ನಲ್ಲಿ ಅಭ್ಯಾಸ ಶಿಬಿರದ ವೇಳೆ ಕೆಲ ಮಹಿಳಾ ಕ್ರೀಡಾಪಟುಗಳ ಜೊತೆ ಕಿತ್ತಾಡಿದ್ದ ಆರೋಪಕ್ಕೆ ತುತ್ತಾಗಿದ್ದರು. ಆದರೆ ತಪ್ಪು ಮಾಹಿತಿಯಿಂದ ಆದ ಘಟನೆ ಎಂದು ಮಹಿಳಾ ಕ್ರೀಡಾಪಟುಗಳು ‘ಕ್ಲೀನ್‌ ಚಿಟ್‌’ ನೀಡಿದ್ದರು. ಇದಾಗ್ಯೂ ಭಾರತೀಯ ಜುಡೋ ಫೆಡರೇಶನ್‌, ಕಾಮನ್‌ವೆಲ್ತ್‌ ಗೇಮ್ಸ್‌ ತಂಡದಿಂದ ಜಸ್ಲೀನ್‌ ಹೆಸರನ್ನು ಕೈಬಿಟ್ಟಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಜಸ್ಲೀನ್‌ ಕೋರ್ಚ್‌ ಮೆಟ್ಟಿಲೇರಿದ್ದರು.