ಬಿಸಿಸಿಐನ ಸಂಪೂರ್ಣ ಅಧಿಕಾರವನ್ನು ತನಗೇ ನೀಡುವಂತೆ ವಿನೋದ್ ರಾಯ್ ಹಾಗೂ ಡಯಾನಾ ಎಡುಲ್ಜಿ ಅವರನ್ನು ಒಳಗೊಂಡ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ನವದೆಹಲಿ(ಆ.17): ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲು ವಿಫವಾಗಿರುವ ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಕಾರ್ಯದರ್ಶಿ ಅಮಿತಾಭ್ ಚೌಧರಿ ಸೇರಿದಂತೆ ಬಿಸಿಸಿಐನ ಆಡಳಿತ ಮಂಡಳಿಯನ್ನು ಸಂಪೂರ್ಣ ವಜಾಗೊಳಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದೆ.

ಸುಪ್ರೀಂಕೋರ್ಟ್‌'ಗೆ ತನ್ನ 5ನೇ ವರದಿ ಸಲ್ಲಿಸಿರುವ ಸಿಒಎ, ಕಾರ್ಯದರ್ಶಿ ಅಮಿತಾಭ್ ಚೌಧರಿ ₹ 1.56 ಕೋಟಿ ರುಪಾಯಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ₹ 1.71 ಕೋಟಿ ರು.ಗಳನ್ನು ಖರ್ಚು ಮಾಡಿದ್ದಾರೆ. ಇದು ಅಧಿಕಾರಿಯೊಬ್ಬರ ಖರ್ಚಿಗಿಂತ ದುಪ್ಪಟ್ಟಾಗಿದೆ. ಹೀಗಾಗಿ ಈ ಬಿಸಿಸಿಐ ಅಧಿಕಾರಿ ವರ್ಗವನ್ನು ತೆಗೆದುಹಾಕುವಂತೆ ಕೋರಿದೆ.

ಅಲ್ಲದೇ ಬಿಸಿಸಿಐನ ಸಂಪೂರ್ಣ ಅಧಿಕಾರವನ್ನು ತನಗೇ ನೀಡುವಂತೆ ವಿನೋದ್ ರಾಯ್ ಹಾಗೂ ಡಯಾನಾ ಎಡುಲ್ಜಿ ಅವರನ್ನು ಒಳಗೊಂಡ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

‘ಪ್ರಸ್ತುತ ಇರುವ ಆಡಳಿತ ಮಂಡಳಿಗೂ, ಈ ಹಿಂದಿನ ಆಡಳಿತ ವರ್ಗಕ್ಕೂ ಯಾವುದೇ ವ್ಯತ್ಯಾಸವಿಲ್ಲ. 6 ತಿಂಗಳುಗಳ ಕಾಲಾವಕಾಶ ನೀಡಿದರೂ ನ್ಯಾಯಮೂರ್ತಿ ಲೋಧಾ ಸಮಿತಿಯ ಪರಿಷ್ಕೃತ ಶಿಫಾರಸುಗಳನ್ನು ಸೂಕ್ತವಾಗಿ ಜಾರಿಗೊಳಿಸಿಲ್ಲ. ಅಲ್ಲದೇ ಸಮಿತಿಯ ಶಿಫಾರಸುಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈಗಿನ ಆಡಳಿತ ಮಂಡಳಿಗೆ ಗೌರವಯುತ ನ್ಯಾಯಾಲಯದ ಸೂಚನೆಗಳನ್ನು ಪಾಲಿಸುವ ಆಸಕ್ತಿ ಸಹ ಇದ್ದಂತೆ ಕಾಣುತ್ತಿಲ್ಲ ಎಂದು ಸಿಒಎ ಆಡಳಿತ ಸಮಿತಿ ಹೇಳಿದೆ.