ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದ ಎಂ.ಎಸ್. ಧೋನಿ ವೃತ್ತಿ ಜೀವನದ 21ನೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಆ್ಯಂಟಿಗುವಾ(ಜು.01): ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಕರಾರುವಕ್ಕಾದ ದಾಳಿಗೆ ತತ್ತರಿಸಿದ ವೆಸ್ಟ್ ಇಂಡಿಸ್ ಪಡೆ 158 ರನ್'ಗಳಿಗೆ ಸರ್ವಪತನ ಕಾಣುವ ಮೂಲಕ 93 ರನ್'ಗಳ ಅಂತರದ ಸೋಲನ್ನನುಭವಿಸಿತು.

ಭಾರತ ನೀಡಿದ್ದ ಸವಾಲಿನ ಗುರಿಬೆನ್ನತ್ತಿದ ವೆಸ್ಟ್ ಇಂಡಿಸ್'ಗೆ ಆರಂಭದಲ್ಲೇ ಆಘಾತ ಎದುರಾಯಿತು. ಎರಡನೇ ಓವರ್'ನಲ್ಲೇ ಆರಂಭಿಕ ಬ್ಯಾಟ್ಸ್'ಮನ್ ಎವಿನ್ ಲಿವೀಸ್'ಗೆ ವೇಗಿ ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು. ಎರಡನೇ ವಿಕೆಟ್'ಗೆ ಶೈ ಹೋಪ್ ಹಾಗೂ ಕೈಲ್ ಹೋಪ್ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ, ಈ ಇಬ್ಬರನ್ನು ಹಾರ್ದಿಕ್ ಪಾಂಡ್ಯ ಬಲಿ ಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು.

ಇದರ ಬೆನ್ನಲ್ಲೇ ದಾಳಿಗಿಳಿದ ಕುಲ್ದೀಪ್ ಯಾದವ್ ವಿಂಡೀಸ್'ಗೆ ಮತ್ತೊಂದು ಶಾಕ್ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಜಾಸನ್ ಮೊಹಮ್ಮದ್ ಹಾಗೂ ರೋವನ್ ಪೋವೆಲ್ ಭಾರತೀಯ ಬೌಲರ್'ಗೆ ಅಲ್ಪ ಪ್ರತಿರೋಧ ತೋರಿದರಾದರೂ, ಭಾರತದ ಗೆಲುವಿಗೇನು ಅಡ್ಡಿಯಾಗಲಿಲ್ಲ. ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಭಾರತಕ್ಕೆ ಎರಡನೇ ಗೆಲುವನ್ನು ತಂದಿತ್ತರು. 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದ ಗೆಲುವಿನ ಮುನ್ನಡೆ ಕಾಯ್ದುಕೊಂಡಿತ್ತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್'ಮನ್ ಅಜಿಂಕ್ಯ ರಹಾನೆ ಹಾಗೂ ಮಹೇಂದ್ರ ಸಿಂಗ್ ಧೋನಿಯ ಆಕರ್ಷಕ ಅರ್ಧಶತಕಗಳ ನೆರವಿನಿಂದ 251 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತ್ತು.

ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದ ಎಂ.ಎಸ್. ಧೋನಿ ವೃತ್ತಿ ಜೀವನದ 21ನೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಭಾರತ : 251/4

ಎಂ.ಎಸ್ ಧೋನಿ : 78*

ಅಜಿಂಕ್ಯ ರಹಾನೆ : 72

ಮಿಗುಲ್ ಕಮ್ಮಿನ್ಸ್ : 56/2

ವೆಸ್ಟ್ ಇಂಡಿಸ್ : 158/10

ಜಾಸನ್ ಮೊಹಮ್ಮದ್ : 40

ರೋವನ್ ಪೋವೆಲ್ : 30
ರವಿಚಂದ್ರನ್ ಅಶ್ವಿನ್ : 28/3

ಪಂದ್ಯ ಪುರುಷೋತ್ತಮ : ಎಂ.ಎಸ್ ಧೋನಿ

ಫಲಿತಾಂಶ: ಭಾರತಕ್ಕೆ 93 ರನ್'ಗಳ ಗೆಲುವು