ವಿಶ್ವದ ಅತ್ಯಂತ ಕಠಿಣ ಓಟವನ್ನು ಪೂರ್ಣಗೊಳಿಸಿ ಭಾರತದ ಕೈರನ್ ಡಿಸೋಜಾ ದಾಖಲೆಯ ಪುಟ ಸೇರಿದ್ದಾರೆ. 246 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿರುವ ಭಾರತದ ಮೊದಲ ಓಟಗಾರ ಎಂಬ ಹೆಗ್ಗಳಿಕೆಗೆ ಕೈರನ್ ಭಾಜನರಾಗಿದ್ದಾರೆ. ಅಕ್ಟೋಬರ್ 1 ರಂದು ಗ್ರೀಸ್'ನ ಅಥೆನ್ಸ್'ನಿಂದ ಶುರುವಾದ ಓಟ ಸ್ಪಾರ್ಟಾನಲ್ಲಿ ಪೂರ್ಣಗೊಂಡಿದೆ. 34 ವರ್ಷಗಳ ಈ ಸ್ಪರ್ಧೆಯ ಇತಿಹಾಸದಲ್ಲಿ ಮೊದಲ ಬಾರಿ ಭಾರತೀಯ ಓಟಗಾರನೊಬ್ಬ ಸ್ಪರ್ಧಾ ಕಣದಲ್ಲಿದ್ದ. ನಾಗಪುರದ ನಿವಾಸಿಯಾಗಿರುವ 23 ವರ್ಷದ ಕೈರನ್, 33 ಗಂಟೆ ಒಂದು ನಿಮಿಷ 38 ಸೆಕೆಂಡ್ ಗಳನ್ನು ತೆಗೆದುಕೊಂಡಿದ್ದಾರೆ. ಓಟವನ್ನು ಪೂರ್ಣಗೊಳಿಸಿದ 234 ಸ್ಪರ್ಧಿಗಳಲ್ಲಿ ಕೈರನ್ 86 ನೇಯವರಾಗಿದ್ದಾರೆ. ಇದೇ ವೇಳೆ ಕೈರನ್ ಇನ್ನೊಂದು ದಾಖಲೆಯನ್ನೂ ಬರೆದಿದ್ದಾರೆ. 18 ಗಂಟೆ 37 ನಿಮಿಷದಲ್ಲಿ 159.5 ಕಿಲೋಮೀಟರ್ ದೂರ ಓಡಿ 47 ನೇ ಚೆಕ್ ಪಾಯಿಂಟ್ ತಲುಪಿ ದಾಖಲೆ ಬರೆದಿದ್ದಾರೆ. ಪೋಲೆಂಡ್​ನ ಓಟಗಾರ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 370 ಮಂದಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.