ಚೇತೇಶ್ವರ ಪೂಜಾರ(79*) ಮತ್ತು ಅಜಿಂಕ್ಯಾ ರಹಾನೆ(40*) ಐದನೇ ವಿಕೆಟ್'ಗೆ ಮುರಿಯದ 93 ರನ್ ಜೊತೆಯಾಟವಾಡುವುದರೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬೆಂಗಳೂರು(ಮಾ.06): ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ಕನ್ನಡಿಗ ಕೆ.ಎಲ್. ರಾಹುಲ್ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಎರಡನೇ ಟೆಸ್ಟ್'ನಲ್ಲಿ ಕಮ್'ಬ್ಯಾಕ್ ಮಾಡುವತ್ತಾ ಹೆಜ್ಜೆಯಿಟ್ಟಿದೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮುಕ್ತಾಯಕ್ಕೆ ಟೀಂ ಇಂಡಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿದೆ. ಈ ಮೂಲಕ ಕೊಹ್ಲಿ ಪಡೆ 126 ರನ್'ಗಳ ಮುನ್ನೆಡೆ ಸಾಧಿಸಿದೆ. ಚೇತೇಶ್ವರ ಪೂಜಾರ(79*) ಮತ್ತು ಅಜಿಂಕ್ಯಾ ರಹಾನೆ(40*) ಐದನೇ ವಿಕೆಟ್'ಗೆ ಮುರಿಯದ 93 ರನ್ ಜೊತೆಯಾಟವಾಡುವುದರೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವನ್ನು 276 ರನ್'ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಆಸೀಸ್ ಪಡೆ ಮೊದಲ ಇನಿಂಗ್ಸ್'ನಲ್ಲಿ 87 ರನ್'ಗಳ ಮುನ್ನೆಡೆ ಸಾಧಿಸಿತು.

ಭಾರತ ಪರ ರವೀಂದ್ರ ಜಡೇಜಾ 63/6 ವಿಕೆಟ್ ಪಡೆದು ಮಿಂಚಿದರು. ಇನ್ನು ಅಶ್ವಿನ್ 2 ವಿಕೆಟ್ ಪಡೆದರೆ, ವೇಗಿಗಳಾದ ಇಶಾಂತ್ ಹಾಗೂ ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭ ಕೂಡ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 39 ರನ್'ಗಳಿದ್ದಾಗ ಅಭಿನವ್ ಮುಕುಂದ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಅರ್ಧಶತಕ ಸಿಡಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಆಸೀಸ್ ನಾಯಕ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್'ಗೆ ಬಲಿಯಾದರು. ಇದಾದ ಕೆಲಹೊತ್ತಿನಲ್ಲೇ ನಾಯಕ ವಿರಾಟ್ ಕೂಡಾ 15 ಗಳಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇನ್ನು ಮೇಲ್ಪಂಕ್ತಿಗೆ ಬಡ್ತಿ ಪಡೆದು ಆಡಲಿಳಿದ ಜಡೇಜಾ ಆಟ ಕೇವಲ 2 ರನ್'ಗಳಿಗೆ ಸೀಮಿತವಾಯಿತು.

 ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನೆಲಕಚ್ಚಿ ಆಟವಾಡಿದ ಚೇತೇಶ್ವರ ಪೂಜಾರ ಅರ್ಧಶತಕ ಪೂರೈಸಿದರು. ಇವರಿಗೆ ಅಜಿಂಕ್ಯಾ ರಹಾನೆ ತಕ್ಕ ಸಾಥ್ ನೀಡಿದರು.