Asianet Suvarna News Asianet Suvarna News

Chess World Cup 2023: ಎರಡನೇ ಸುತ್ತಿನಲ್ಲೂ ಡ್ರಾ ಸಾಧಿಸಿದ ಪ್ರಜ್ಞಾನಂದ..! ಇಂದು ಟೈ ಬ್ರೇಕರ್

ಶನಿವಾರ ನಡೆದಿದ್ದ ಮೊದಲ ಸುತ್ತು ಡ್ರಾಗೊಂಡ ಬಳಿಕ ಭಾನುವಾರದ 2ನೇ ಸುತ್ತು ಫಲಿತಾಂಶ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ತೀವ್ರ ಪೈಪೋಟಿಗೆ ಸಾಕ್ಷಿಯಾದ 2ನೇ ಸುತ್ತು, 47 ನಡೆಗಳ ಬಳಿಕ ಡ್ರಾಗೊಂಡಿತು.

Chess World Cup 2023 R Praggnanandhaa pushes Fabiano Caruana into tie breaker kvn
Author
First Published Aug 21, 2023, 9:12 AM IST

ಬಾಕು(ಅಜರ್‌ಬೈಜಾನ್‌): 2 ದಶಕಗಳ ಬಳಿಕ ಚೆಸ್‌ ವಿಶ್ವಕಪ್‌ನ ಫೈನಲ್‌ ಪ್ರವೇಶಿಸಿದ ಭಾರತೀಯ ಎನ್ನುವ ದಾಖಲೆ ಬರೆಯುವ ತವಕದಲ್ಲಿರುವ ಆರ್‌.ಪ್ರಜ್ಞಾನಂದ, ಅಮೆರಿಕದ ಫ್ಯಾಬಿಯಾನೋ ಕರುವಾನಾ ಅವರ ವಿರುದ್ಧದ ಸೆಮಿಫೈನಲ್‌ ಪಂದ್ಯವನ್ನು ಟೈ ಬ್ರೇಕರ್‌ಗೆ ಕೊಂಡೊಯ್ದಿದ್ದಾರೆ.

ಶನಿವಾರ ನಡೆದಿದ್ದ ಮೊದಲ ಸುತ್ತು ಡ್ರಾಗೊಂಡ ಬಳಿಕ ಭಾನುವಾರದ 2ನೇ ಸುತ್ತು ಫಲಿತಾಂಶ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ತೀವ್ರ ಪೈಪೋಟಿಗೆ ಸಾಕ್ಷಿಯಾದ 2ನೇ ಸುತ್ತು, 47 ನಡೆಗಳ ಬಳಿಕ ಡ್ರಾಗೊಂಡಿತು.

ಭಾನುವಾರ ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, ಆರಂಭದಲ್ಲಿ ಆತ್ಮವಿಶ್ವಾಸದಿಂದ ಆಡಿದರೂ ಒಂದು ಹಂತದಲ್ಲಿ ಸಮಯದ ಅಭಾವ ಎದುರಿಸಬೇಕಾಯಿತು. 15ನೇ ನಡೆಗೆ ಬರೋಬ್ಬರಿ 25 ನಿಮಿಷಗಳನ್ನು ತೆಗೆದುಕೊಂಡರೂ, ಪಂದ್ಯ ಸಂಪೂರ್ಣವಾಗಿ ವಿಶ್ವ ನಂ.2 ಫ್ಯಾಬಿಯಾನೋ ಹಿಡಿತಕ್ಕೆ ಸಿಗದಂತೆ ಎಚ್ಚರ ವಹಿಸಿದರು.

Ireland vs India 2nd T20I: ಸಂಜು, ರುತುರಾಜ್‌, ರಿಂಕು ಶೈನ್‌, ಐರ್ಲೆಂಡ್‌ ವಿರುದ್ಧ ಭಾರತ ಸರಣಿ ವಿನ್‌!

ಪಂದ್ಯದುದ್ದಕ್ಕೂ 18 ವರ್ಷದ ಭಾರತೀಯ ಆಟಗಾರನ ಮೇಲೆ ಒತ್ತಡ ಹೇರಿದ ಫ್ಯಾಬಿಯಾನೋ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ ಪ್ರಜ್ಞಾನಂದ ಆಕರ್ಷಕ ನಡೆಗಳ ಮೂಲಕ ಎದುರಾಳಿಗೆ ಹಾಗೂ ನೋಡುಗರಿಗೆ ಅಚ್ಚರಿ ಮೂಡಿಸಿದರು.

ಸೋಮವಾರ ಟೈ ಬ್ರೇಕರ್‌ ಸುತ್ತು ನಡೆಯಲಿದ್ದು, ಇದರಲ್ಲಿ ಗೆಲ್ಲುವ ಆಟಗಾರ ಫೈನಲ್‌ ಪ್ರವೇಶಿಸಿ, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಆಡಲಿದ್ದಾರೆ.

ಟೈ ಬ್ರೇಕರ್‌ ಮಾದರಿ ಹೇಗೆ?

ಮೊದಲು ಪ್ರತಿ ಆಟಗಾರನಿಗೆ ತಲಾ 25 ನಿಮಿಷ + ಪ್ರತಿ ನಡೆಗೆ 10 ಸೆಕೆಂಡ್‌ ಹೆಚ್ಚಿಗೆ ಸಮಯ ಸಿಗಲಿದೆ. ಈ ರೀತಿ 2 ಸುತ್ತು ನಡೆಯಲಿದೆ. ಇದರಲ್ಲಿ ವಿಜೇತರು ಯಾರೆಂದು ನಿರ್ಧಾರವಾಗದಿದ್ದರೆ, ಆಗ ತಲಾ 10 ನಿಮಿಷ + ಪ್ರತಿ ಪ್ರತಿ ನಡೆಗೆ 10 ಸೆಕೆಂಡ್ ಹೆಚ್ಚಳದಂತೆ ಮತ್ತೆರಡು ಸುತ್ತು ನಡೆಯಲಿದೆ. ಅದರಲ್ಲೂ ಫಲಿತಾಂಶ ಹೊರಬೀಳದಿದ್ದರೆ, ಪ್ರತಿ ಆಟಗಾರರಿಗೆ ತಲಾ 5 ನಿಮಿಷ + ಪ್ರತಿ ನಡೆಗೆ 3 ಸೆಕೆಂಡ್‌ ಹೆಚ್ಚಿಗೆ ಸಮಯದೊಂದಿಗೆ 2 ಸುತ್ತು ಆಡಿಸಲಾಗುತ್ತದೆ. ಇದರಲ್ಲೂ ಫಲಿತಾಂಶ ಸಿಗದಿದ್ದರೆ ಆಗ, ತಲಾ 3 ನಿಮಿಷ + ಪ್ರತಿ ನಡೆಗೆ 2 ಸೆಕೆಂಡ್‌ ಹೆಚ್ಚಳದಂತೆ ವಿಜೇತರು ನಿರ್ಧಾರವಾಗುವ ವರೆಗೂ ಆಡಿಸಲಾಗುತ್ತದೆ.

ಮಗನ ಸಾಧನೆಗೆ ಮೂಕಳಾದ ತಾಯಿ, ವೈರಲ್ ಆಯ್ತು ಫೋಟೋ, ಯಾರು ಈ ಪ್ರಜ್ಞಾನಂದ..?

ಫೈನಲ್‌ಗೆ ಕಾರ್ಲ್‌ಸನ್‌ ಲಗ್ಗೆ

ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಮ್ಯಾಗ್ನಸ್‌ ಕಾರ್ಲ್‌ಸನ್‌ 1.5-0.5 ಅಂತರದಲ್ಲಿ ಗೆದ್ದು ಚೊಚ್ಚಲ ಬಾರಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಗೆದ್ದಿದ್ದ ಕಾರ್ಲ್‌ಸನ್‌, 2ನೇ ಸುತ್ತನ್ನು ನಿರಾಯಾಸವಾಗಿ ಡ್ರಾ ಮಾಡಿಕೊಂಡರು.

ಭಾರತೀಯ ನೆಟ್‌ಬಾಲ್‌ಗೆ ರಾಜ್ಯದ ಗಿರೀಶ್‌ ಉಪಾಧ್ಯಕ್ಷ, ಮಾನಸ ಜಂಟಿ ಕಾರ್ಯದರ್ಶಿ

ಬೆಂಗಳೂರು: ಭಾರತೀಯ ನೆಟ್‌ಬಾಲ್‌ ಫೆಡರೇಶನ್‌ನ ನೂತನ ಉಪಾಧ್ಯಕ್ಷರಾಗಿ ಕರ್ನಾಟಕ ರಾಜ್ಯ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಸಿ. ಹಾಗೂ ಜಂಟಿ ಕಾರ್ಯದರ್ಶಿಯಾಗಿ ರಾಜ್ಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಾನಸ ಎಲ್‌.ಜಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

Follow Us:
Download App:
  • android
  • ios