ತಿರುವನಂತಪುರಂ ತಲುಪಿದ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ
* 44ನೇ ಚೆಸ್ ಒಲಿಂಪಿಯಾಡ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
* ಜುಲೈ 28ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಚೆಸ್ ಒಲಿಂಪಿಯಾಡ್
* ತಿರುವನಂತಪುರಂ ತಲುಪಿದ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ
ತಿರುವನಂತಪುರಂ(ಜು.23): ಜುಲೈ 28ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ 44ನೇ ಚೆಸ್ ಒಲಿಂಪಿಯಾಡ್ ಟೂರ್ನಿಯ ಟಾರ್ಚ್ ರಿಲೇ ಕೇರಳದ ರಾಜಧಾನಿ ತಿರುವನಂತಪುರಂ ತಲುಪಿದೆ. ಕೇರಳದ ಸಾರಿಗೆ ಸಚಿವ ಆಂಟೊನಿ ರಾಜು ನಗರದ ಜಿಮ್ಮಿ ಜಾರ್ಜ್ ಇಂಡೋರ್ ಸ್ಟೇಡಿಯಂನಲ್ಲಿ ಜಿಲ್ಲಾಧಿಕಾರಿ ನವಜೋತ್ ಖೋಸಾ ಅವರಿಂದ ಚೆಸ್ ಒಲಿಂಪಿಯಾಡ್ ಟೂರ್ನಿಯ ಟಾರ್ಚ್ ರಿಲೇ ಸ್ವೀಕರಿಸಿದರು.
ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ(ಸಾಯ್) ಈ ಕುರಿತಂತೆ ಟ್ವೀಟ್ ಮಾಡಿದ್ದು, ಚೊಚ್ಚಲ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ಜುಲೈ 22ರಂದು ಕೇರಳ ಸರ್ಕಾರದ ಸಾರಿಗೆ ಸಚಿವರಾದ ಟೊನಿ ರಾಜು ಅವರು ತ್ರಿವೆಂಡ್ರಮ್‌ನ ಜಿಲ್ಲಾಧಿಕಾರಿಯಾದ ಶ್ರೀಮತಿ ನವಜೋತ್ ಖೋಸಾ ಅವರಿಂದ ಟಾರ್ಚ್ ಸ್ವೀಕರಿಸಿದರು ಎಂದು ಟ್ವೀಟ್ ಮಾಡಿದೆ. ಇದಕ್ಕೂ ಮೊದಲು ಚೆಸ್ ಟಾರ್ಚ್ ರಿಲೇ ಬುಧವಾರ ಲಕ್ಷದ್ವೀಪ್‌ಗೆ ಬಂದಿತ್ತು.
44ನೇ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟವು ಚೆನ್ನೈನ ಮಹಾಬಲಿಪುರಂ ಮುಂಬರುವ ಜುಲೈ 28ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ. ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ಲೇಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೂಪಾಲ್, ಪಾಟ್ನಾ, ಕೋಲ್ಕತಾ, ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ನಗರಗಳನ್ನು ಸಂಚರಿಸಿ ಇದೀಗ ತಿರುವನಂತಪುರಂ ಬಂದು ತಲುಪಿದೆ.
44ನೇ ಚೆಸ್ ಒಲಿಂಪಿಯಾಡ್ (Chess Olympiad) ಟೂರ್ನಿಯಲ್ಲಿ ಸುಮಾರು 188 ದೇಶಗಳ 2000ಕ್ಕೂ ಅಧಿಕ ಚೆಸ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(ಫಿಡೆ) ಒಲಿಂಪಿಕ್ಸ್ ಮಾದರಿಯಲ್ಲಿ ಟಾರ್ಚ್ ರಿಲೇ ಸಂಪ್ರದಾಯವನ್ನು ತನ್ನ ಚೆಸ್ ಒಲಿಂಪಿಯಾಡ್‌ನಲ್ಲಿ ಆರಂಭಿಸಲು ಈ ವರ್ಷ ತೀರ್ಮಾನಿಸಿದೆ. ಇನ್ನು ಮುಂದೆ ಪ್ರತಿ ಚೆಸ್ ಒಲಿಂಪಿಯಾಡ್ ಆರಂಭವಾಗುವ ಮುನ್ನ ಭಾರತದಿಂದಲೇ ಟಾರ್ಚ್ ರಿಲೇ ಹೊರಡಲಿದೆ. ಚೆಸ್ ಎನ್ನುವ ಕ್ರೀಡೆ ಭಾರತದಲ್ಲೇ ಹುಟ್ಟಿದ್ದರಿಂದ ಈ ತೀರ್ಮಾನವನ್ನು ತೆಗೆದುಕೊಂಡಿದೆ ಫಿಡೆ.
ಕೆ ಚಂದ್ರಶೇಖರ್ ರಾವ್ ಅವರನ್ನು ಆಹ್ವಾನಿಸಿದ ಸ್ಟಾಲೀನ್:
ಚೆನ್ನೈನ ಮಹಾಬಲಿಪುರಂನಲ್ಲಿ ಇದೇ ಜುಲೈ 28ರಿಂದ ಆರಂಭವಾಗಲಿರುವ 44ನೇ ಚೆಸ್ ಒಲಿಂಪಿಯಾಡ್ ವೀಕ್ಷಿಸಲು ಆಗಮಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲೀನ್, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಆಹ್ವಾನಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸ್ಟಾಲೀನ್, ಡಿಎಂಕೆ ಸಂಸದ ಆರ್. ಗಿರಿರಾಜನ್ ಮೂಲಕ ಆಹ್ವಾನ ಪತ್ರಿಕೆಯನ್ನು ಕೆ ಚಂದ್ರಶೇಖರ್ ರಾವ್ ಅವರಿಗೆ ಕಳಿಸಿಕೊಟ್ಟಿದ್ದಾರೆ. ಸಂಸದ ಗಿರಿರಾಜನ್, ತೆಲಂಗಾಣ ಸಿಎಂ ಕೆಸಿಆರ್ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಚೆಸ್ ಒಲಿಂಪಿಯಾಡ್ ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದ್ದಾರೆ.
ಕೆ ಚಂದ್ರಶೇಖರ್ ರಾವ್ ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಹೊರಗಿಟ್ಟು ವಿರೋಧ ಪಕ್ಷಗಳೆನಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಆಮ್ ಆದ್ಮಿ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲೀನ್ ಕೂಡಾ ಆಹ್ವಾನ ಪತ್ರಿಕೆ ಕಳಿಸಿರುವುದು ಮುಂಬರುವ ದಿನಗಳಲ್ಲಿ ರಾಜಕೀಯ ಧೃವೀಕರಣವಾಗಲಿದೆ ಎನ್ನುವಂತಹ ವಿಶ್ಲೇಷಣೆಗಳು ಕೇಳಿ ಬರಲಾರಂಭಿಸಿವೆ.