ಹಾಕಿ ಚಾಂಪಿಯನ್ಸ್ ಟ್ರೋಫಿ: ಇಂದು ಇಂಡೋ-ಆಸೀಸ್ ಕದನ
ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಭಾರತ, ಟೂರ್ನಿಯಲ್ಲಿ ಕನಸಿನ ಆರಂಭ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಗೋಲುಗಳಿಂದ ಬಗ್ಗುಬಡಿದಿದ್ದ ತಂಡ, 2ನೇ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತ್ತು. 2 ಗೆಲುವುಗಳೊಂದಿಗೆ 6 ಅಂಕ ಸಂಪಾದಿಸಿರುವ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಬ್ರೆಡಾ(ನೆದರ್‌ಲೆಂಡ್ಸ್)[ಜೂ.27]: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 2 ಗೆಲುವುಗಳೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡ, ಗೆಲುವಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ಅಮೋಘ ಲಯದಲ್ಲಿರುವ ಭಾರತಕ್ಕೆ ಇಂದು ವಿಶ್ವ ಚಾಂಪಿಯನ್ ಆಸ್ಪ್ರೇಲಿಯಾ ಎದುರಾಗಲಿದೆ.
ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಭಾರತ, ಟೂರ್ನಿಯಲ್ಲಿ ಕನಸಿನ ಆರಂಭ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಗೋಲುಗಳಿಂದ ಬಗ್ಗುಬಡಿದಿದ್ದ ತಂಡ, 2ನೇ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತ್ತು. 2 ಗೆಲುವುಗಳೊಂದಿಗೆ 6 ಅಂಕ ಸಂಪಾದಿಸಿರುವ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ನೂತನ ಕೋಚ್ ಹರೇಂದರ್ ಸಿಂಗ್ ತಂಡದ ಸಂಯೋಜನೆ ಬದಲಿಸಿದ್ದು, ಎಲ್ಲಾ ಮೂರೂ ವಿಭಾಗಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ರಕ್ಷಣಾ ಪಡೆ ಮತ್ತಷ್ಟು ಬಲಿಷ್ಠಗೊಂಡಿದ್ದು, ಮಿಡ್‌ಫೀಲ್ಡ್ ಆಟಗಾರರು ಫಾರ್ವರ್ಡ್ ಆಟಗಾರರಿಗೆ ಚೆಂಡನ್ನು ಒದಗಿಸುತ್ತಿರುವ ರೀತಿ ಗಮನ ಸೆಳೆಯುತ್ತಿದೆ. ಹಿರಿಯ ಆಟಗಾರರಾದ ಪಿ.ಆರ್.ಶ್ರೀಜೇಶ್, ಸರ್ದಾರ್ ಸಿಂಗ್, ಎಸ್.ವಿ.ಸುನಿಲ್ ಜವಾಬ್ದಾರಿ ಅರಿತು ಆಡುತ್ತಿದ್ದರೆ, ಯುವಕರಾದ ಮನ್‌ದೀಪ್, ಹರ್ಮನ್‌ಪ್ರೀತ್, ದಿಲ್‌ಪ್ರೀತ್ ಸಿಂಗ್ ಗೋಲು ಗಳಿಕೆಯಲ್ಲಿ ಮುಂದಿದ್ದಾರೆ.
ಗಾಯಾಳು ರಮಣ್‌ದೀಪ್ ಟೂರ್ನಿಯಿಂದ ಹೊರಬಿದ್ದಿದ್ದು, ಭಾರತಕ್ಕೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ ಸೂಕ್ತ ಬದಲಿ ಆಟಗಾರರು ತಂಡದಲ್ಲಿರುವ ಕಾರಣ, ತಂಡಕ್ಕೆ ಹೆಚ್ಚಿನ ಆತಂಕವಿಲ್ಲ. ಕಳೆದ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಶೂಟೌಟ್‌ನಲ್ಲಿ ಆಸ್ಪ್ರೇಲಿಯಾಗೆ ಶರಣಾಗಿತ್ತು. ಆ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ತಂಡ ಎದುರು ನೋಡುತ್ತಿದೆ.
ಭಾರತಕ್ಕೆ ಹೋಲಿಸಿದರೆ, ಆಸ್ಪ್ರೇಲಿಯಾ ಈ ಟೂರ್ನಿಯಲ್ಲಿ ಸಾಧಾರಣ ಆರಂಭ ಪಡೆದುಕೊಂಡಿದೆ. ಬೆಲ್ಜಿಯಂ ವಿರುದ್ಧ 3-3ರ ಡ್ರಾಗೆ ತೃಪ್ತಿಪಟ್ಟರೆ, ಪಾಕಿಸ್ತಾನ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತ್ತು. ಭಾರತ ವಿರುದ್ಧ ಉತ್ತಮ ಅಂತರದಲ್ಲಿ ಜಯ ಸಾಧಿಸಲು ತಂಡ ಕಾತರಿಸುತ್ತಿದೆ.
ಪಂದ್ಯ ಆರಂಭ: ಸಂಜೆ 6.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್