ಹೈದರಾಬಾದ್‌(ಜು.24): ಕ್ರೀಡೆಯಲ್ಲಿ ಸಹೋದರರು ಒಟ್ಟಿಗೆ ಆಡುವುದು ಅಪರೂಪ. ನೂರಾರು ವರ್ಷ ಇತಿಹಾಸವಿರುವ ಕ್ರಿಕೆಟ್‌ನಲ್ಲೂ ಕೆಲವೇ ಕೆಲ ಸಹೋದರರು ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲವೇ ವೃತ್ತಿಪರ ಲೀಗ್‌ಗಳಲ್ಲಿ ಒಟ್ಟಿಗೆ ಆಡಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಸಹೋದರರು ಒಂದೇ ತಂಡದಲ್ಲಿ ಒಟ್ಟಿಗೆ ಆಡಿದ ಉದಾಹರಣೆ ಕಡಿಮೆ. ಆದರೆ 7ನೇ ಆವೃತ್ತಿಯಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಅಪರೂಪದ ಜೋಡಿಗೆ ಅವಕಾಶ ಮಾಡಿಕೊಟ್ಟಿದೆ. ಹರ್ಯಾಣದ ಭೈನ್ಸ್‌ವಾಲ್‌ ಗ್ರಾಮದ ಸಹೋದರರಾದ ಸುನಿಲ್‌ ಕುಮಾರ್‌ ಹಾಗೂ ಸುಮಿತ್‌ ಕುಮಾರ್‌, ಗುಜರಾತ್‌ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದಾರೆ.

ಇಬ್ಬರೂ ಡಿಫೆಂಡ​ರ್ಸ್: 23 ವರ್ಷದ ಸುನಿಲ್‌, ಗುಜರಾತ್‌ ತಂಡದ ನಾಯಕ. 6ನೇ ಆವೃತ್ತಿಯಲ್ಲೂ ತಂಡವನ್ನು ಮುನ್ನಡೆಸಿ ಫೈನಲ್‌ ವರೆಗೂ ಕೊಂಡೊಯ್ದಿದ್ದರು. 18 ವರ್ಷದ ಸುಮಿತ್‌ ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಯಲ್ಲಿ ಆಡುತ್ತಿದ್ದಾರೆ. ಗುಜರಾತ್‌ ತಂಡ ನಡೆಸಿದ ಪ್ರತಿಭಾನ್ವೇಷಣೆ ಯೋಜನೆಯಲ್ಲಿ ಸಿಕ್ಕ ಪ್ರತಿಭೆ ಸುಮಿತ್‌. ವಿಶೇಷ ಎಂದರೆ ಸಹೋದರರಿಬ್ಬರೂ ಡಿಫೆಂಡರ್‌ಗಳು. ಸುನಿಲ್‌, ಕವರ್‌ ಕ್ಷೇತ್ರದಲ್ಲಿ ಆಡಿದರೆ, ಸುಮಿತ್‌ ಎಡ ಕಾರ್ನರ್‌ನಲ್ಲಿ ಆಡುತ್ತಾರೆ.

‘ಅಣ್ಣನೊಂದಿಗೆ ಪ್ರೊ ಕಬಡ್ಡಿಯಲ್ಲಿ ಆಡುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ. ಅಂಕಣದಲ್ಲಿ ಆಡುವಾಗ ಸುನಿಲ್‌ ನನ್ನನ್ನು ಸಹೋದರನಂತೆ ನೋಡುವುದಿಲ್ಲ. ಎಲ್ಲಾ ಆಟಗಾರರನ್ನು ಸಮನಾಗಿ ಕಾಣುತ್ತಾರೆ. ತಂಡ ಮೊದಲು ಎನ್ನುವ ಅವರ ಗುಣವೇ ಯಶಸ್ಸಿಗೆ ಕಾರಣ. ಅಂಕಣದಾಚೆ ನಾವಿಬ್ಬರು ಬಹಳಷ್ಟು ಮೋಜು ಮಾಡುತ್ತೇವೆ’

- ಸುಮಿತ್‌ ಕುಮಾರ್‌, ಗುಜರಾತ್‌ ಡಿಫೆಂಡರ್‌

ಅಣ್ಣನೇ ಸ್ಫೂರ್ತಿ: ಸುನಿಲ್‌ ಪ್ರೊ ಕಬಡ್ಡಿಯಲ್ಲಿ ಈಗಾಗಲೇ ಅತ್ಯುತ್ತಮ ಡಿಫೆಂಡರ್‌ ಎಂದು ಹೆಸರು ಮಾಡಿರುವ ಆಟಗಾರ. ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡುತ್ತಿರುವ ಸುಮಿತ್‌ಗೆ ಕ್ರೀಡೆಯತ್ತ ಆಕರ್ಷಿತರಾಗಲು ಹಿರಿಯ ಸಹೋದರ ಸುನಿಲ್ಲೇ ಸ್ಫೂರ್ತಿ. ‘ಬಾಲ್ಯದಿಂದಲೂ ನಾನು ಅಣ್ಣನನ್ನೇ ನೋಡಿಯೇ ಕಬಡ್ಡಿ ಕಲಿತಿದ್ದೇನೆ. ಸಣ್ಣ ವಯಸ್ಸಿನಲ್ಲೇ ಅವರು ವೃತ್ತಿಪರ ತಂಡವೊಂದರ ನಾಯಕರಾಗಿದ್ದ ಬಗ್ಗೆ ಬಹಳ ಹೆಮ್ಮೆ ಇದೆ. ಅವರಂತೆಯೇ ಪ್ರೊ ಕಬಡ್ಡಿಯಲ್ಲಿ ಯಶಸ್ಸು ಕಾಣುವುದು ನನ್ನ ಗುರಿ’ ಎಂದು ಸುಮಿತ್‌ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

‘ಸುನಿಲ್‌ ಹಾಗೂ ಸುಮಿತ್‌ ಇಬ್ಬರೂ ಪ್ರತಿಭಾನ್ವಿತ ಆಟಗಾರರು. ಅತಿ ಕಡಿಮೆ ವಯಸ್ಸಿನಲ್ಲಿ ವೃತ್ತಿಪರ ಲೀಗ್‌ಗೆ ಪ್ರವೇಶಿಸಿದ್ದಾರೆ. ಸುನಿಲ್‌ ಈಗಾಗಲೇ ತಂಡದ ಆಧಾರಸ್ತಂಭವಾಗಿದ್ದು, ಸುಮಿತ್‌ ಸಹ ಹೆಚ್ಚಿನ ಯಶಸ್ಸು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸವಿದೆ’

- ಮನ್‌ಪ್ರೀತ್‌ ಸಿಂಗ್‌, ಗುಜರಾತ್‌ ಕೋಚ್‌

ಸೋದರ ಸಂಬಂಧಿಯೂ ಡಿಫೆಂಡರ್‌: ಗುಜರಾತ್‌ ತಂಡದ ಮತ್ತೊಬ್ಬ ತಾರಾ ಡಿಫೆಂಡರ್‌ ಪರ್ವೇಶ್‌ ಭೈನ್ಸ್‌ವಾಲ್‌, ಸುನಿಲ್‌ ಹಾಗೂ ಸುಮಿತ್‌ರ ಸೋದರ ಸಂಬಂಧಿ. ಒಂದು ಕುಟುಂಬದ ಮೂವರು ಆಟಗಾರರು ಒಂದೇ ತಂಡದಲ್ಲಿ ಆಡುತ್ತಿರುವುದು ತೀರಾ ಅಪರೂಪ.

ಯೋಗೇಶ್ವರ್‌ ದತ್‌ ಊರಿನವರು: ಗುಜರಾತ್‌ ತಂಡದ ಈ ಮೂವರು ಪ್ರತಿಭಾನ್ವಿತ ಡಿಫೆಂಡರ್‌ಗಳು ಹರ್ಯಾಣದ ಭೈನ್ಸ್‌ವಾಲ್‌ನವರು. ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿ ಪಟು ಯೋಗೇಶ್ವರ್‌ ದತ್‌ ಸಹ ಇದೇ ಊರಿನವರು. ಯೋಗೇಶ್ವರ್‌ ಜತೆ ಉತ್ತಮ ಒಡನಾಟ ಹೊಂದಿರುವುದಾಗಿ ಹೇಳಿರುವ ಸುನಿಲ್‌, ತಮ್ಮ ಗ್ರಾಮ ಅನೇಕ ಕಬಡ್ಡಿ ಆಟಗಾರರನ್ನು ಕೊಡುಗೆ ನೀಡಿದ್ದು ಬಹುತೇಕರು ಡಿಫೆಂಡರ್‌ಗಳೇ ಎಂದು ತಿಳಿಸಿದರು.