. 2 ವರ್ಷಗಳ ಹಿಂದೆ ಜಕಾರ್ತದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸೈನಾ 1 ಗಂಟೆ 14 ನಿಮಿಷಗಳ ಕಾಲ ನಡೆದ ರೋಚಕ ಹೋರಾಟದಲ್ಲಿ 21-12, 17-21,10-21 ಗೇಮ್‌ಗಳಿಂದ ಸೋಲೊಪ್ಪಿಕೊಂಡರು

ಗ್ಲಾಸ್ಗೊ(ಆ.26): ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಅದೇ ರೀತಿ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತ ಪಡಿಸಿದ್ದಾರೆ.

ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೈನಾ, ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ ವೀರೋಚಿತ ಸೋಲು ಅನುಭವಿಸಿದರು. 2 ವರ್ಷಗಳ ಹಿಂದೆ ಜಕಾರ್ತದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸೈನಾ 1 ಗಂಟೆ 14 ನಿಮಿಷಗಳ ಕಾಲ ನಡೆದ ರೋಚಕ ಹೋರಾಟದಲ್ಲಿ 21-12, 17-21,10-21 ಗೇಮ್‌ಗಳಿಂದ ಸೋಲೊಪ್ಪಿಕೊಂಡರು.

ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು, ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತ ಪಡಿಸಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೇರಿದ್ದ ಏಕೈಕ ಭಾರತದ ಆಟಗಾರ ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

ಸಿಂಧು, ಮೊದಲ ಗೇಮ್‌ನಲ್ಲಿ ಚೀನಾದ ಆಟಗಾರ್ತಿಯಿಂದ ಕೊಂಚ ಪ್ರತಿರೋಧ ಎದುರಿಸಿದರು. ಆದರೆ 2ನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಸುಲಭ ಗೆಲುವು ಪಡೆಯುವಲ್ಲಿ ಸಫಲರಾದರು. ಇದರೊಂದಿಗೆ ಸಿಂಧು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಮೂರನೇ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.