ಮೊಬೈಲ್'ನಲ್ಲಿ ಇಂಟರ್ನೆಟ್ ಬಳಕೆಯ ವ್ಯಾಪ್ತಿ ಹೆಚ್ಚಾದಂತೆ ಈಗ ಬೆಟ್ಟಿಂಗ್ ಸ್ವರೂಪವೂ ಬದಲಾಗಿದೆ. ಕ್ಷಣಕ್ಷಣವೂ ಬೆಟ್ಟಿಂಗ್ ಸ್ವೀಕರಿಸಲಾಗುತ್ತದೆ. ಓವರ್'ನ ಆರು ಬಾಲಿಗೂ ಬೆಟ್ಟಿಂಗ್ ಪ್ಲೇಸ್ ಮಾಡುವ ಟ್ರೆಂಡ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ.
ಮುಂಬೈ(ಜೂನ್ 16): ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿವೆ. ಇವೆರಡು ದೇಶಗಳು ಎಂಥದ್ದೇ ಟೂರ್ನಿಯಲ್ಲಿ ಮುಖಾಮುಖಿಯಾದರೂ ಸಿಕ್ಕಾಪಟ್ಟೆ ಪಾಪುಲಾರಿಟಿ ಇರುತ್ತದೆ. ಅತೀ ಹೆಚ್ಚು ಜನರು ಪಂದ್ಯವನ್ನು ವೀಕ್ಷಿಸುತ್ತಾರೆ. ಪ್ರಮುಖ ಟೂರ್ನಿಯ ಫೈನಲ್'ನಲ್ಲಿ ಇವುಗಳು ಆಡುತ್ತಿರುವುದು ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ. ಬೆಟ್ಟಿಂಗ್ ದಂಧೆಕೋರರಿಗಂತೂ ಕ್ರಿಕೆಟ್, ಅದರಲ್ಲೂ ಭಾರತ-ಪಾಕ್ ಪಂದ್ಯವಂದರಂತೂ ಸುಗ್ಗಿಯೋ ಸುಗ್ಗಿ. ದಶಕದ ಹಿಂದೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಪಂದ್ಯದಲ್ಲಿ ಮುಖಾಮುಖಿಯಾದರೆ ಸಾಕು 500 ಮಿಲಿಯನ್ ಡಾಲರ್, ಅಂದರೆ ಸುಮಾರು 3 ಸಾವಿರ ಕೋಟಿ ರೂ.ಗೂ ಹೆಚ್ಚು ಹಣದ ಬೆಟ್ಟಿಂಗ್ ದಂಧೆ ನಡೆಯುತ್ತಿತ್ತು. ಈಗ ಪಾಕಿಸ್ತಾನವು ಫೀನಿಕ್ಸ್'ನಂತೆ ಮೇಲೆದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿ ಭಾರತವನ್ನು ಎದಿರುಗೊಂಡಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಲೋಕ ಹೊಸ ಕಳೆಯಿಂದ ಗರಿಗೆದರಿ ನಿಂತಿದೆ. ಒಂದು ಅಂದಾಜಿನ ಪ್ರಕಾರ ಭಾನುವಾರದ ಫೈನಲ್ ಪಂದ್ಯದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಹಣವು ಬೆಟ್ಟಿಂಗ್ ದಂಧೆಯಲ್ಲಲಿ ಹರಿದಾಡಲಿದೆ.
ಭಾರತದಲ್ಲಿ ಬೆಟ್ಟಿಂಗ್ ಅಕ್ರಮವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಸಾಕಷ್ಟು ಬೆಟ್ಟಿಂಗ್ ಸಿಂಡಿಕೇಟ್'ಗಳನ್ನು ಹಿಡಿದು ಮುಚ್ಚಿಹಾಕಿದ್ದಾರೆ. ಆದರೂ ಕದ್ದುಮುಚ್ಚಿ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಪ್ರಕರಣಗಳು ಹೇರಳವಾಗಿವೆ. ಫೈನಲ್ ಪಂದ್ಯಕ್ಕೆ 2 ದಿನ ಮುಂಚೆಯೇ ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ಶುರುವಾಗಿದೆ. ಇಂದು ಶುಕ್ರವಾರ ಆನ್'ಲೈನ್'ನಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಬೆಟ್ಟಿಂಗ್ ಸಿಂಡಿಕೇಟ್'ಗಳೊಂದಿಗೆ ಈ ನಾಲ್ವರಿಗೆ ಲಿಂಕ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಆರೋಪಿಗಳು ಒಂದೆರಡು ಗಂಟೆಯಲ್ಲೇ ಲಕ್ಷಾಂತರ ಹಣದ ಬೆಟ್ಟಿಂಗ್ ಸ್ವೀಕರಿಸಿದ್ದಾರೆನ್ನಲಾಗಿದೆ.
ಕ್ವಿಕ್ ಬೆಟ್ಟಿಂಗ್:
ಮೊಬೈಲ್'ನಲ್ಲಿ ಇಂಟರ್ನೆಟ್ ಬಳಕೆಯ ವ್ಯಾಪ್ತಿ ಹೆಚ್ಚಾದಂತೆ ಈಗ ಬೆಟ್ಟಿಂಗ್ ಸ್ವರೂಪವೂ ಬದಲಾಗಿದೆ. ಕ್ಷಣಕ್ಷಣವೂ ಬೆಟ್ಟಿಂಗ್ ಸ್ವೀಕರಿಸಲಾಗುತ್ತದೆ. ಓವರ್'ನ ಆರು ಬಾಲಿಗೂ ಬೆಟ್ಟಿಂಗ್ ಪ್ಲೇಸ್ ಮಾಡುವ ಟ್ರೆಂಡ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಮೈದಾನದಲ್ಲಿ ಆಡುವುದಕ್ಕೂ ಟಿವಿಯಲ್ಲಿ ನೇರ ಪ್ರಸಾರವಾಗುವುದಕ್ಕೂ ಸುಮಾರು 12 ಸೆಕೆಂಡ್ ವ್ಯತ್ಯಾಸವಿದೆ. ಆನ್'ಲೈನ್'ನಲ್ಲಿ ಇದು ಇನ್ನೂ ವಿಳಂಬವಾಗಿರುತ್ತದೆ. ಸ್ಟೇಡಿಯಂನಲ್ಲಿ ಕೂತು ಬೆಟ್ಟಿಂಗ್ ನಡೆಸಲು ಹೇಳಿ ಮಾಡಿಸಿದ ವಾತಾವರಣವಿದೆ. ಬುಕ್ಕಿಗಳು ಮೈದಾನದಿಂದಲೇ ನೇರವಾಗಿ ಮಾಹಿತಿ ಪಡೆಯುತ್ತಾರೆ.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಸುಮಾರು 40-80 ಕೋಟಿಯಷ್ಟು ಜನರು ಭಾನುವಾರದ ಪಂದ್ಯವನ್ನು ವೀಕ್ಷಿಸುವ ಸಾಧ್ಯತೆ ಇದೆ.
