107ನೇ ನಿಮಿಷದಲ್ಲಿ ಮೊದಲ ಬಾರಿಗೆ ಬಗಾನ್ ರಕ್ಷಣಾ ಪಡೆಯನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಬಾರಿಸಿದ ವಿನೀತ್, 119ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಕಟಕ್(ಮೇ.21): ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) 2017ರ ಫೆಡರೇಶನ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 14 ಬಾರಿ ಚಾಂಪಿಯನ್ ಮೋಹನ್ ಬಗಾನ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿದ ಬಿಎಫ್‌ಸಿ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.

ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಒಮ್ಮೆಯೂ ಗೋಲು ಪೆಟ್ಟಿಗೆಗೆ ಚೆಂಡನ್ನು ಸೇರಿಸಲು ಸಾಧ್ಯವಾಗದೆ ಹೋದಾಗ, ಫಲಿತಾಂಶದ ನಿರ್ಧಾರಕ್ಕಾಗಿ ಹೆಚ್ಚುವರಿ 30 ನಿಮಿಷಗಳನ್ನು ನೀಡಲಾಯಿತು. ಈ ಅವಧಿಯಲ್ಲಿ ಬಿಎಫ್‌'ಸಿಯ ಭರವಸೆಯ ಆಟಗಾರ ಸಿ.ಕೆ.ವಿನೀತ್ 2 ಗೋಲು ಬಾರಿಸಿದರು.

107ನೇ ನಿಮಿಷದಲ್ಲಿ ಮೊದಲ ಬಾರಿಗೆ ಬಗಾನ್ ರಕ್ಷಣಾ ಪಡೆಯನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಬಾರಿಸಿದ ವಿನೀತ್, 119ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಪಂದ್ಯಕ್ಕೂ ಮುನ್ನ ಬಗಾನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ತೋರಿತ್ತು. ಖಾಯಂ ನಾಯಕ ಸುನಿಲ್ ಚೆಟ್ರಿ ಹಾಗೂ ಅನುಭವಿ ಮಿಡ್‌ಫೀಲ್ಡರ್ ಕೆಮರೂನ್ ವಾಟ್ಸನ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದರೂ, ಬಿಎಫ್‌ಸಿ ತನ್ನ ಯೋಜನೆಗೆ ತಕ್ಕಂತೆ ಆಡುವುದನ್ನು ಮರೆಯಲಿಲ್ಲ. ಭಾರತದಲ್ಲೇ ಬಲಿಷ್ಠ ಎಂದು ಕರೆಸಿಕೊಳ್ಳುವ ತಂಡದ ರಕ್ಷಣಾ ಪಡೆ, ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿತು.