ಈ ಸೋಲಿನಿಂದ ಬೆಂಗಳೂರು ಕಂಗೆಡುವ ಪ್ರಮೇಯವೇನಿಲ್ಲ. ಎಎಫ್'ಸಿ ಕಪ್ ಇತಿಹಾಸದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕ್ಲಬ್ ಎಂಬ ಹೊಸ ಹಿರಿಮೆ ಬೆಂಗಳೂರು ಎಫ್'ಸಿಗೆ ಬಂದಿದೆ.

ದೋಹಾ(ನ. 06): ಬೆಂಗಳೂರು ಫುಟ್ಬಾಲ್ ಕ್ಲಬ್ ಚೊಚ್ಚಲ ಎಎಫ್'ಸಿ ಕಪ್ ಟೂರ್ನಿಯನ್ನು ಗೆಲ್ಲುವ ಅವಕಾಶ ಕೈತಪ್ಪಿತು. ನಿನ್ನೆ ರಾತ್ರಿ ನಡೆದ ಫೈನಲ್'ನಲ್ಲಿ ಇರಾಕ್'ನ ಪ್ರಬಲ ಏರ್'ಫೋರ್ಸ್ ಕ್ಲಬ್ ವಿರುದ್ಧ ಬೆಂಗಳೂರಿಗರು 0-1 ಗೋಲಿನಿಂದ ಸೋಲನುಭವಿಸಿದರು. ಆದರೂ ಬಿಎಫ್'ಸಿ ಕೊನೆಯ ಕ್ಷಣದವರೆಗೂ ಪಂದ್ಯ ಉಳಿಸಿಕೊಳ್ಳಲು ವೀರೋಚಿತ ಹೋರಾಟ ತೋರಿದ್ದು ಭಾರತೀಯರಿಗೆ ಹೆಮ್ಮೆ ತಂದಿತು.

ಇರಾಕೀ ಕ್ಲಬ್ ಎದುರು ಬೆಂಗಳೂರು ಎಫ್'ಸಿ ಗೆಲ್ಲುವ ನಿರೀಕ್ಷೆ ಇದ್ದದ್ದು ತೀರಾ ಕಡಿಮೆಯೇ. ಭಾರತೀಯರಿಗಿಂತ ಫುಟ್ಬಾಲ್ ಆಟದಲ್ಲಿ ಒಂದು ಮಟ್ಟ ಮೇಲಿರುವ ಇರಾಕೀ ಕ್ಲಬ್ ವಿರುದ್ಧ ಸೆಣಸಾಡುವುದೇ ಒಂದು ಭಾರತೀಯರಿಗೆ ಒಂದು ಯೋಗ. ಈ ಹಿನ್ನೆಲೆಯಲ್ಲಿ ಬಿಎಫ್'ಸಿ ತೋರಿದ ಆಟ ನಿಜಕ್ಕೂ ಪ್ರಶಂಸಾರ್ಹ. ಪಂದ್ಯದ ಮೊದಲಾರ್ಧದವರೆಗೂ ಬೆಂಗಳೂರು ಎಫ್'ಸಿಯ ಡಿಫೆನ್ಸ್ ಬಲಿಷ್ಠವಾಗಿತ್ತು. ಟೂರ್ನಿಯಲ್ಲಿ ಮೊದಲ ಬಾರಿಗೆ ಗೋಲ್'ಕೀಪಿಂಗ್ ಮಾಡಿದ ಲಾಲ್'ತುವಾಮಾವಿಯಾ ರಾಲ್ಟೆ ಉತ್ತಮ ಪ್ರದರ್ಶನ ತೋರಿ ಎದುರಾಳಿಗಳ ಅನೇಕ ಪ್ರಯತ್ನವನ್ನು ವಿಫಲಗೊಳಿಸಿದರು. ಮೊದಲಾರ್ಧ ಮುಕ್ತಾಯವಾದಾಗ 0-0 ಸಮಸ್ಥಿತಿ ಇತ್ತು. ಆದರೆ, ದ್ವಿತೀಯಾರ್ಧದಲ್ಲಿ 71ನೇ ನಿಮಿಷದಲ್ಲಿ ಇರಾಕ್'ನ ಗೋಲ್ ಮೆಷೀನ್ ಹಮ್ಮದಿ ಅಹ್ಮದ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅದ್ಭುತವಾದ ಕಾಂಬಿನೇಶನ್'ನಲ್ಲಿ ಬಂದ ಆ ಗೋಲು ನಿಜಕ್ಕೂ ಇರಾಕೀ ಫುಟ್ಬಾಲ್'ನ ಮಟ್ಟವನ್ನು ಸೂಚಿಸುವಂತಿತ್ತು. ಆ ಮುನ್ನಡೆ ಬಂದ ಬಳಿಕ ಏರ್'ಫೋರ್ಸ್ ಕ್ಲಬ್ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿತು. ಬೆಂಗಳೂರಿನ ಗೋಲ್ ಪೆಟ್ಟಿಗೆಯತ್ತ ಇನ್ನಷ್ಟು ಆಕ್ರಮಣಗಳನ್ನು ಮಾಡಿತು. ಬೆಂಗಳೂರಿನ ಅದೃಷ್ಟಕ್ಕೆ ಇನ್ನಷ್ಟು ಗೋಲು ಬರಲಿಲ್ಲ.

ಆದರೆ, ಪ್ರಬಲ ಎದುರಾಳಿಗಳಿಂದ ಪೂರ್ಣಪ್ರಮಾಣದ ದಾಳಿ ನಡೆಯುತ್ತಿದ್ದರೂ ಬೆಂಗಳೂರು ಎಫ್'ಸಿ ಎದೆಗುಂದದೆ ಪ್ರತಿಹೋರಾಟ ತೋರಿ ಅಚ್ಚರಿ ಮೂಡಿಸಿತು. ಪಂದ್ಯ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದ ಬಿಎಫ್'ಸಿ ಗೋಲು ಗಳಿಸಲು ನಿಜಕ್ಕೂ ಶಕ್ತಿಮೀರಿ ಪ್ರಯತ್ನಿಸಿತು. ಛೇಟ್ರಿ, ವಿನೀತ್ ಅವರಿಗೆ ಗೋಲು ಗಳಿಸುವ ಕೆಲ ಅಪೂರ್ವ ಅವಕಾಶ ಕೈಚೆಲ್ಲಿ ಹೋಗಿದ್ದು ನಿರಾಶೆ ಮೂಡಿಸಿತು. ಆದರೆ, ಎದುರಾಳಿಗಳ ಆಟದ ಮಟ್ಟದ ಮುಂದೆ ಬೆಂಗಳೂರು ಸೋತು ಶರಣಾಗಬೇಕಾಯಿತು.

ಈ ಸೋಲಿನಿಂದ ಬೆಂಗಳೂರು ಕಂಗೆಡುವ ಪ್ರಮೇಯವೇನಿಲ್ಲ. ಎಎಫ್'ಸಿ ಕಪ್ ಇತಿಹಾಸದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕ್ಲಬ್ ಎಂಬ ಹೊಸ ಹಿರಿಮೆ ಬೆಂಗಳೂರು ಎಫ್'ಸಿಗೆ ಬಂದಿದೆ. ಅಲ್ಲದೇ, ರನ್ನರ್ ಅಪ್ ಆಗಿ ಬೆಂಗಳೂರಿನ ತಂಡಕ್ಕೆ 3.34 ಕೋಟಿ ರೂಪಾಯಿ ಬಹುಮಾನ ಪ್ರಾಪ್ತವಾಗಿದೆ. ತಂಡದ ಅವಿರತ ಶ್ರಮಕ್ಕೆ ಸಿಕ್ಕ ತಕ್ಕ ಫಲ ಇದು.

ಹಾಲಿ ಐ-ಲೀಗ್ ಚಾಂಪಿಯನ್ ಆಗಿರುವ ಬಿಎಫ್'ಸಿ ಮುಂದಿನ ಸೀಸನ್'ನ ಎಎಫ್'ಸಿ ಕಪ್ ಹಾಗೂ ಎಎಫ್'ಸಿ ಚಾಂಪಿಯನ್ಸ್ ಲೀಗ್'ನಲ್ಲಿ ಪಾಲ್ಗೊಳ್ಳಲಿದೆ. ಆಗ ಬೆಂಗಳೂರಿಗರು ಇದಕ್ಕಿಂತ ಉತ್ತಮ ಪ್ರದರ್ಶನ ತೋರಬಲ್ಲರು ಎಂದು ತಂಡದ ಹೊಸ ಕೋಚ್ ಆಲ್ಬರ್ಟ್ ರೋಕಾ ವಿಶ್ವಾಸ ವ್ಯಕ್ತಪಡಿಸಿದರು.