Asianet Suvarna News Asianet Suvarna News

ಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರಿಗರ ಠೇಂಕಾರ; ಪ್ರಶಸ್ತಿಗೆ ಕಣ್ಣಿಟ್ಟಿದ್ದ ಐಜ್ವಾಲ್'ಗೆ ಶಾಕ್..!

ಎಎಫ್‌'ಸಿ ಕಪ್‌ ಟೂರ್ನಿಯಲ್ಲಿ ಸತತ ಎರಡು ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಸುನಿಲ್‌ ಛೆಟ್ರಿ ಪಡೆಯ ಹುಮ್ಮಸ್ಸು ಈ ಗೆಲುವಿನೊಂದಿಗೆ ಇನ್ನಷ್ಟು ಹೆಚ್ಚಾಗಿದೆ. ಈ ಜಯದಿಂದಾಗಿ ಹಾಲಿ ಚಾಂಪಿಯನ್‌ ಬಿಎಫ್‌'ಸಿ ತಂಡಕ್ಕೆ 3 ಅಂಕಗಳು ದೊರೆತಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದೆ.

bengaluru fc beat aizwal in i league
  • Facebook
  • Twitter
  • Whatsapp

ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಐ-ಲೀಗ್‌ ಪಂದ್ಯದಲ್ಲಿ ಐಜ್ವಾಲ್‌ ಎಫ್‌'ಸಿ ತಂಡದ ವಿರುದ್ಧ ಹೆಚ್ಚುವರಿ ನಿಮಿಷ (94ನೇ ನಿ.)ದಲ್ಲಿ ಗೋಲು ಬಾರಿಸಿದ ಸರ್ಬಿಯಾದ ಮರ್ಜನ್‌ ಜುಗೊವಿಚ್‌ ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ 1-0 ಗೋಲಿನ ರೋಚಕ ಗೆಲುವು ತಂದುಕೊಟ್ಟರು. 

ಎಎಫ್‌'ಸಿ ಕಪ್‌ ಟೂರ್ನಿಯಲ್ಲಿ ಸತತ ಎರಡು ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಸುನಿಲ್‌ ಛೆಟ್ರಿ ಪಡೆಯ ಹುಮ್ಮಸ್ಸು ಈ ಗೆಲುವಿನೊಂದಿಗೆ ಇನ್ನಷ್ಟು ಹೆಚ್ಚಾಗಿದೆ. ಈ ಜಯದಿಂದಾಗಿ ಹಾಲಿ ಚಾಂಪಿಯನ್‌ ಬಿಎಫ್‌'ಸಿ ತಂಡಕ್ಕೆ 3 ಅಂಕಗಳು ದೊರೆತಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದೆ. ಈ ಲೀಗ್‌'ನಲ್ಲಿ 15 ಪಂದ್ಯಗಳನ್ನು ಪೂರೈಸಿರುವ ಬಿಎಫ್‌ಸಿ ಒಟ್ಟು 21 ಅಂಕಗಳನ್ನು ಪಡೆದುಕೊಂಡಿದೆ. ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವ ಗುರಿ ಹೊತ್ತಿರುವ ಹಾಲಿ ಚಾಂಪಿಯನ್‌ ಬಿಎಫ್‌'ಸಿಯ ಪ್ರಶಸ್ತಿ ಕನಸು ಈಗಾಗಲೇ ಕಮರಿಹೋಗಿದೆ. ಆದರೆ, ಮಾನ ಉಳಿಸಿಕೊಳ್ಳುವ ಅವಕಾಶ ಇದೆ.

ಇನ್ನು, ಈ ಋತುವಿನಲ್ಲಿ ಅತ್ಯಾಕರ್ಷಕ ಪ್ರದರ್ಶನದೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದ್ದ ಐಜ್ವಾಲ್‌ ತಂಡಕ್ಕೂ ಈ ಪಂದ್ಯ ಮಹತ್ವದ್ದೆನಿಸಿತ್ತು. ಪ್ರಮುಖ ಮೂವರು ಆಟಗಾರರ ಅನುಪಸ್ಥಿತಿಯಲ್ಲೂ ಬಿಎಫ್‌'ಸಿ ಅಮೋಘ ಆಟವಾಡಿತು. ಮಂದಗತಿಯ ಆರಂಭಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರು ತಂಡ ಭಾನುವಾರದ ಪಂದ್ಯದಲ್ಲಿ ಮೊದಲ ನಿಮಿಷದಿಂದಲೇ ಆಕ್ರಮಣಕ್ಕಾರಿ ಆಟಕ್ಕಿಳಿಯಿತು. ಸತತವಾಗಿ ಎದುರಾಳಿಯ ಮೇಲೆ ಒತ್ತಡ ಹೇರಲು ಯಶಸ್ವಿಯಾದ ಛೆಟ್ರಿ ಪಡೆ ಹಲವು ಗೋಲು ಬಾರಿಸುವ ಅವಕಾಶಗಳನ್ನು ಸೃಷ್ಟಿಸಿಕೊಂಡಿತಾದರೂ, ಅದರ ಲಾಭ ಪಡೆಯುವಲ್ಲಿ ಎಡವಿತು. ಪಂದ್ಯದ ಎರಡೂ ಅವಧಿಯಲ್ಲಿ ಉಭಯ ತಂಡಗಳಿಂದ ಗೋಲು ದಾಖಲಾಗದ ಕಾರಣ, 5 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಆದರೆ, ಪಟ್ಟುಬಿಡದೆ ನಡೆದ ಹೋರಾಟದ ಅಂತಿಮ ಘಟ್ಟದಲ್ಲಿ ಸಿಕ್ಕ ಫ್ರೀ ಕಿಕ್‌'ನಲ್ಲಿ ಛೆಟ್ರಿ ನೀಡಿದ ಅದ್ಭುತ ಪಾಸನ್ನು ಗೋಲಾಗಿ ಪರಿವರ್ತಿಸುವಲ್ಲಿ ಜುಗೊವಿಚ್‌ ಯಶಸ್ವಿಯಾದರು. 

ಪ್ರಶಸ್ತಿಗಾಗಿ ಬಗಾನ್‌-ಐಜ್ವಾಲ್‌ ಪೈಪೋಟಿ:
ಹಾಲಿ ಚಾಂಪಿಯನ್‌ ಬಿಎಫ್‌ಸಿ ಈಗಾಗಲೇ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿರುವ ಕಾರಣ, 15 ಪಂದ್ಯಗಳೊಂದಿಗೆ 30 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿರುವ ಐಜ್ವಾಲ್‌ ಹಾಗೂ 14 ಪಂದ್ಯಗಳಿಂದ 29 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿರುವ ಮೋಹನ್‌ ಬಗಾನ್‌ ನಡುವೆ ಪ್ರಶಸ್ತಿ ಗೆಲ್ಲಲು ಜಿದ್ದಾಜಿದ್ದಿ ಏರ್ಪಟ್ಟಿದೆ. ಮೇಲ್ನೋಟಕ್ಕೆ ಈ ಬಾರಿ ಬಗಾನ್‌, ಐ-ಲೀಗ್‌ ಚಾಂಪಿಯನ್‌ ಆಗುವ ನೆಚ್ಚಿನ ತಂಡವೆನಿಸಿಕೊಂಡಿದೆ. ಆದರೆ, ಐಜ್ವಾಲ್‌ಗೆ ಲೀಗ್‌ನಲ್ಲಿ ಇನ್ನೆರೆಡು ಪಂದ್ಯ ಬಾಕಿ ಇದ್ದರೆ, ಬಗಾನ್‌ಗಿನ್ನೂ 3 ಪಂದ್ಯಗಳು ಬಾಕಿ ಇವೆ. ಈ ಪಂದ್ಯಗಳ ಫಲಿತಾಂಶದ ಮೇಲೆ ಇವೆರಡು ತಂಡಗಳ ಪ್ರಶಸ್ತಿ ಕನಸನ್ನು ನಿರ್ಧರಿಸಲಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios