ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಬೆಂಗಳೂರು ಬುಲ್ಸ್ ಮೊದಲಾರ್ಧ ಮುಕ್ತಾಯದ ವೇಳೆಗೆ 23-08 ಅಂಕಗಳ ಮುನ್ನಡೆ ಸಾಧಿಸಿತ್ತು. ದ್ವಿತಿಯಾರ್ಧದ ಆರಂಭದ 10 ನಿಮಿಷಗಳ ಕಾಲ ಬೆಂಗಳೂರು ಪಂದ್ಯದ ಮೇಲೆ ಇನ್ನಷ್ಟು ಹಿಡಿತ ಸಾಧಿಸಿತ್ತು.
ನಾಗ್ಪುರ(ಆ.04): ದ್ವಿತಿಯಾರ್ಧದಲ್ಲಿ ತಮಿಳ್ ತಲೈವಾಸ್ ಆಕ್ರಮಣಕಾರಿಯಾಟದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ 1 ಅಂಕಗಳ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಮಂಕಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಗ್ಪುರ ಚರಣದ ಮೊದಲ ಪಂದ್ಯದಲ್ಲಿ ಬುಲ್ಸ್ ಪಡೆಯ ನಾಯಕ ರೋಹಿತ್ ಕುಮಾರ್ ಪ್ರಭಾವಿಯಾಟದ ನೆರವಿನಿಂದ ತಮಿಳ್ ತಲೈವಾಸ್ ಎದುರು 32-31 ಅಂಕಗಳ ಅಂತರದ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಬಿ ವಲಯದಲ್ಲಿ ಎರಡೂ ಪಂದ್ಯಗಳನ್ನು ಗೆದ್ದ ಬುಲ್ಸ್ ಪಡೆ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಬೆಂಗಳೂರು ಬುಲ್ಸ್ ಮೊದಲಾರ್ಧ ಮುಕ್ತಾಯದ ವೇಳೆಗೆ 23-08 ಅಂಕಗಳ ಮುನ್ನಡೆ ಸಾಧಿಸಿತ್ತು. ದ್ವಿತಿಯಾರ್ಧದ ಆರಂಭದ 10 ನಿಮಿಷಗಳ ಕಾಲ ಬೆಂಗಳೂರು ಪಂದ್ಯದ ಮೇಲೆ ಇನ್ನಷ್ಟು ಹಿಡಿತ ಸಾಧಿಸಿತ್ತು. ರೋಹಿತ್ 11 ಅಂಕ ಪಡೆದು ತಂಡಕ್ಕೆ ಮುನ್ನಡೆ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಈ ವೇಳೆ ಬೆಂಗಳೂರು ಬುಲ್ಸ್ ಪಡೆ 28-15 ಅಂಕಗಳ ಮುನ್ನಡೆ ಸಾಧಿಸಿತ್ತು. ಇನ್ನೇನು ರೋಹಿತ್ ಪಡೆ ಪಂದ್ಯವನ್ನು ಸುಲಭವಾಗಿ ಕೈವಶ ಮಾಡಿಕೊಳ್ಳಲಿದೆ ಎನ್ನುವಾಗ ಸಚಿನ್ ಕುಮಾರ್'ರನ್ನು ಟ್ಯಾಕಲ್ ಮಾಡಿದ ತಲೈವಾಸ್ ಪಂದ್ಯಕ್ಕೆ ರೋಚಕ ತಿರುವನ್ನು ನೀಡುವಲ್ಲಿ ಯಶಸ್ವಿಯಾದರು.
ಆ ಬಳಿಕ ಮಿಂಚಿನ ದಾಳಿ ನಡೆಸಿದ ಅಜಯ್ ಠಾಕೂರ್ ನೇತೃತ್ವದ ತಲೈವಾಸ್ ಯಶಸ್ವಿ ರೈಡಿಂಗ್ ಹಾಗೂ ಟ್ಯಾಕಲ್'ಗಳ ಮೂಲಕ ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಕೊನೆಯ 10 ನಿಮಿಷದಲ್ಲಿ ತಲೈವಾಸ್ ಕಲೆಹಾಕಿದ್ದು ಬರೋಬ್ಬರಿ 12 ಅಂಕಗಳಾದರೆ, ಬುಲ್ಸ್ ಖಾತೆಗೆ ಜಮೆಯಾಗಿದ್ದು ಕೇವಲ ಒಂದು ಅಂಕ ಮಾತ್ರ. ದ್ವಿತಿಯಾರ್ಧದ ಕೊನೆಯ ಒಂದು ನಿಮಿಷದಲ್ಲಿ ರೋಹಿತ್ ಪಡೆ ಕೇವಲ 1 ಅಂಕ ಮುನ್ನಡೆ ಸಾಧಿಸಿತ್ತು. ಕೊನೆಯ ರೈಡ್ ರಕ್ಷಣಾತ್ಮಕವಾಗಿ ಆಡುವ ಮೂಲಕ ರೋಹಿತ್ ಪಂದ್ಯವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
