30ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ 25-15 ಅಂಕಗಳ ಮುನ್ನಡೆ ಸಾಧಿಸಿತು. ಪಂದ್ಯ ಮುಕ್ತಾಯಕ್ಕೆ ಕಡೇ 10 ನಿಮಿಷಗಳಿದ್ದಾಗಲೂ ಬುಲ್ಸ್ ಪಡೆಯಿಂದ ನಿರೀಕ್ಷಿತ ಪ್ರತಿರೋಧ ಕಂಡುಬರಲಿಲ್ಲ. ಆದರೆ ಪಂದ್ಯ ಮುಕ್ತಾಯಕ್ಕೆ ಕಡೇ 5 ನಿಮಿಷಗಳಿದ್ದಾಗ ಪಂದ್ಯದಲ್ಲಿ ನಾಟಕೀಯ ಬದಲಾವಣೆಗಳಾದವು.

ವರದಿ: ನವೀನ್ ಕೊಡಸೆ

ನವದೆಹಲಿ(ಸೆ.23): ಗೆಲ್ಲಬೇಕೆನ್ನುವಷ್ಟರಲ್ಲಿ ಕೊನೆ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದ ಬಲಾಢ್ಯ ಬೆಂಗಾಲಿ ವಾರಿಯರ್ಸ್ ಎದುರು ಬೆಂಗಳೂರು ಬುಲ್ಸ್ ಸೋಲು ಅನುಭವಿಸಿತು. ಕನ್ನಡಿಗ ಹರೀಶ್ ನಾಯ್ಕ್ ಮಾತ್ರ ಅತ್ಯದ್ಭುತ ಪ್ರದರ್ಶನ ತೋರಿದರು.

ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲ ಎಂಟು ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಆಲೌಟ್ ಆಗುವ ಮೂಲಕ 4-11 ಅಂಕಗಳ ಆರಂಭಿಕ ಹಿನ್ನಡೆ ಅನುಭವಿಸಿತು. ಆದರೆ 9ನೇ ನಿಮಿಷದಲ್ಲಿ ಕನ್ನಡಿಗ ಹರೀಶ್ ನಾಯ್ಕ್ ಸೂಪರ್ ರೈಡ್ ಮೂಲಕ ಬುಲ್ಸ್’ಗೆ 2 ಅಂಕ ತಂದಿತ್ತರು. ಆ ಬಳಿಕ ಮನೀಂದರ್ ಸಿಂಗ್ ಅವರನ್ನು ಟ್ಯಾಕಲ್ ಮಾಡಿದ ರಾಕೇಶ್ ಕುಮಾರ್ ಪಡೆ ಪುಟಿದೇಳುವ ಮುನ್ಸೂಚನೆ ನೀಡಿತು. ಆದರೆ ಬೆಂಗಾಲ್ ವಾರಿಯರ್ಸ್ ತಂಡದ ದೀಪಕ್ ನರ್ವಾಲ್ ಮಿಂಚಿನ ದಾಳಿ ಹಾಗೂ ಸುರ್ಜೀತ್ ಸಿಂಗ್ ಅವರ ಟ್ಯಾಕಲ್’ಗಳು ಜಾಂಗ್ ಕುನ್ ಲೀ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟಿತು. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ಬೆಂಗಾಲ್ ವಾರಿಯರ್ಸ್ 18-10 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಎಂಟುಗಳ ಹಿನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬುಲ್ಸ್ ಮತ್ತೆ ಹಳೆ ಚಾಳಿಯನ್ನೇ ಮುಂದುವರೆಸಿತು. ಬೆಂಗಾಲ್ ವಾರಿಯರ್ಸ್ ಪಡೆಯ ಬಲಿಷ್ಠ ಕೋಟೆಯನ್ನು ಭೇದಿಸಲು ಬುಲ್ಸ್ ಪಡೆ ಮತ್ತೆ ಹಿನ್ನಡೆ ಅನುಭವಿಸಿತು.

30ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ 25-15 ಅಂಕಗಳ ಮುನ್ನಡೆ ಸಾಧಿಸಿತು. ಪಂದ್ಯ ಮುಕ್ತಾಯಕ್ಕೆ ಕಡೇ 10 ನಿಮಿಷಗಳಿದ್ದಾಗಲೂ ಬುಲ್ಸ್ ಪಡೆಯಿಂದ ನಿರೀಕ್ಷಿತ ಪ್ರತಿರೋಧ ಕಂಡುಬರಲಿಲ್ಲ. ಆದರೆ ಪಂದ್ಯ ಮುಕ್ತಾಯಕ್ಕೆ ಕಡೇ 5 ನಿಮಿಷಗಳಿದ್ದಾಗ ಪಂದ್ಯದಲ್ಲಿ ನಾಟಕೀಯ ಬದಲಾವಣೆಗಳಾದವು. ಈ ವೇಳೆ ಹರೀಶ್ ನಾಯ್ಕ್ ಚುರುಕಿನ ದಾಳಿಯಿಂದಾಗಿ ಬೆಂಗಾಲ್ ವಾರಿಯರ್ಸ್ ಆಲೌಟ್ ಆಯಿತು. ಕನ್ನಡಿಗ ಹರೀಶ್ ನಾಯ್ಕ್ ಸತತ ಸೂಪರ್ ರೈಡ್ ನಡೆಸುವ ಮೂಲಕ ಬೆಂಗಳೂರು ಬುಲ್ಸ್ 27-28 ಅಂಕಗಳಿಕೆಯಲ್ಲಿ ಸನೀಹಕ್ಕೆ ಬಂದಿತಾದರೂ ಕಡೇ ನಿಮಿಷದಲ್ಲಿ ಬುಲ್ಸ್ ಮಾಡಿಕೊಂಡ ಎಡವಟ್ಟಿನಿಂದಾಗಿ ಪಂದ್ಯವನ್ನು 29-33 ಅಂಕಗಳಿಂದ ಪಂದ್ಯವನ್ನು ಕೈಚೆಲ್ಲಿತು. ಮನೀಂದರ್ ಸಿಂಗ್ ರೈಡಿಂಗ್’ನಲ್ಲಿ 9 ಅಂಕ ಹಾಗೂ ಸುರ್ಜೀತ್ ಸಿಂಗ್ ಟ್ಯಾಕಲ್’ನಲ್ಲಿ 5 ಅಂಕ ಕಲೆಹಾಕುವ ಮೂಲಕ ವಾರಿಯರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟರ್ನಿಂಗ್ ಪಾಯಿಂಟ್

ಪಂದ್ಯ ಮುಕ್ತಾಯಕ್ಕೆ ಕೇವಲ 2 ನಿಮಿಷಗಳಿದ್ದಾಗ ಬುಲ್ಸ್ 27-28 ಕೇವಲ ಒಂದು ಅಂಕ ಹಿನ್ನಡೆ ಅನುಭವಿಸಿತ್ತು. ಈ ವೇಳೆ ಮಣೀಂದರ್ ಸಿಂಗ್ ಸೂಪರ್ ರೈಡ್ ಮಾಡುವ ಮೂಲಕ ಬೋನಸ್ ಸಹಿತ ಒಟ್ಟು 4 ಅಂಕ ಗಳಿಸುವ ಮೂಲಕ ತಂಡದ ಫಲಿತಾಂಶದ ಗತಿಯನ್ನೇ ಬದಲಿಸಿದರು. ಇನ್ನು ಬುಲ್ಸ್ ಪಡೆಯ ತಾರಾ ಆಟಗಾರರಾದ ನಾಯಕ ರೋಹಿತ್ ಕುಮಾರ್(2) ಹಾಗೂ ಅಜಯ್ ಕುಮಾರ್(1 ಅಂಕ ) ನೀರಸ ಪ್ರದರ್ಶನ ತೋರಿದ್ದು ಬುಲ್ಸ್ ಸೋಲಿಗೆ ಕಾರಣವಾಯಿತು.

ಶ್ರೇಷ್ಠ ರೈಡರ್: ಹರೀಶ್ ನಾಯ್ಕ್(11 ಅಂಕ)

ಶ್ರೇಷ್ಠ ಡಿಫೆಂಡರ್: ಮಹೀಂದರ್ ಸಿಂಗ್(5 ಅಂಕ)