ಬೆಂಗಳೂರು(ಜ.7): ನ್ಯಾ. ಲೋಧಾ ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸೆಡ್ಡು ಹೊಡೆದು ಅದೇ ನ್ಯಾಯಾಲಯದಿಂದ ಪದಚ್ಯುತಗೊಂಡಿರುವ ಕ್ರಿಕೆಟ್ ಪದಾಧಿಕಾರಿಗಳೆಲ್ಲಾ ಕ್ರೀಡಾಂಗಣಗಳನ್ನು ಆಟಕ್ಕೆ ಬಿಟ್ಟುಕೊಡದಿರುವ ವಿಚಿತ್ರ ನಿರ್ಧಾರಕ್ಕೆ ಬರಲು ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ನೇತೃತ್ವದಲ್ಲಿ ತಯಾರಿ ನಡೆಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ತನ್ನದೇ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸುತ್ತಿದ್ದ ಅಳಿಯ ಗುರುನಾಥ್ ಮೇಯಪ್ಪನ್ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದಲ್ಲಿ ಖುದ್ದು ಭಾಗಿಯಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಹಲವಾರು ಬಾರಿ ಛೀಮಾರಿ ಹಾಕಿಸಿಕೊಂಡು ಕಡೆಗೂ ಹುದ್ದೆಯಿಂದ ಕಡ್ಡಾಯವಾಗಿ ಕೆಳಗಿಳಿಸಲ್ಪಟ್ಟಿದ್ದ ಶ್ರೀನಿವಾಸನ್ ನೇತೃತ್ವದಲ್ಲಿ ದೇಶದ 30 ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪೈಕಿ 24 ರಾಜ್ಯಗಳ ಪದಾಧಿಕಾರಿಗಳು ಇಂದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಸೇರಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚಿಸಿದವು ಎಂದು ಹೇಳಲಾಗಿದೆ.

ಅಂದಹಾಗೆ ಈ ಸಭೆಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಇತ್ತೀಚೆಗಷ್ಟೇ ರಾಜಿನಾಮೆ ನೀಡಿದ ಬ್ರಿಜೇಶ್ ಪಟೇಲ್ ಕೂಡ ಇದ್ದುದು ಗಮನಾರ್ಹ. ಮೂರು ವರ್ಷಗಳ ಹಿಂದೆ ಇದೇ ಶ್ರೀನಿ ವಿರುದ್ಧ ನಿಂತಿದ್ದವರೇ ಈಗ ಅವರನ್ನು ಮುಂಚೂಣಿಯಲ್ಲಿಟ್ಟುಕೊಂಡು ಕ್ರಿಕೆಟ್ ಆಡಳಿತದ ಅಧಿಕಾರವನ್ನು ಉಳಿಸಿಕೊಳ್ಳಲು ತಂತ್ರಗಾರಿಕೆ ಹೆಣೆಯಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು, ಬಹುತೇಕ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸೊಸೈಟಿ ಕಾಯಿದೆಯಡಿ ನೋಂದಾಯಿಸಿಕೊಂಡಿದ್ದು, ಬಿಸಿಸಿಐನ ಭಾಗವಾಗಿ ಉಳಿಯದಿರುವ ಸಂಪೂರ್ಣ ಹಕ್ಕನ್ನು ಒಳಗೊಂಡಿದ್ದು, ಇದನ್ನೇ ಲೋಧಾ ಸಮಿತಿ ಶಿಫಾರಸುಗಳ ವಿರುದ್ಧದ ಅಸ್ತ್ರವನ್ನಾಗಿಸಿಕೊಳ್ಳಲು ನಿರ್ಧರಿಸಿವೆ ಎನ್ನಲಾಗಿದೆ.