ನವದೆಹಲಿ(ಮೇ.31) : ಕ್ರಿಕೆಟಿಗರ ಸಂಭಾವನೆ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಟೀಮ್ಇಂಡಿಯಾ ಆಯ್ಕೆ ಸಮಿತಿ, ಅಂಪೈರ್, ಮ್ಯಾಚ್ ರೆಫ್ರಿ ಹಾಗೂ ವಿಡೀಯೋ ಅನಾಲಿಸ್ಟ್‌ಗಳ ಸ್ಯಾಲರಿ ಹೆಚ್ಚಳಕ್ಕೆ ಬಿಸಿಸಿಐ ಮುಂದಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಮ್ ಎಸ್ ಕೆ ಪ್ರಸಾದ್ ಸದ್ಯ 80 ಲಕ್ಷ ರೂಪಾಯಿ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದಾರೆ. ಸಮಿತಿಯ ಇಬ್ಬರು ಸದಸ್ಯರಾದಗಗನ್ ಖೋಡಾ ಹಾಗು ಜತಿನ್ ಪ್ರಾಂಜಪೆ ವಾರ್ಷಿಕ 60 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಆದರೆ ನೂತನ ನಿಯಮದ ಪ್ರಕರಾ, ಆಯ್ಕೆ ಸಮಿತಿ ಮುಖ್ಯಸ್ಥ 1 ಕೋಟಿ ರೂಪಾಯಿ ಹಾಗು ಸದಸ್ಯರು 75 ರಿಂದ 80 ಲಕ್ಷ ರೂಪಾಯಿ ಪಡೆಯಲಿದ್ದಾರೆ. 


ಅಂಪೈರ್, ಮ್ಯಾಚ್ ರೆಫ್ರಿ ಹಾಗೂ ವಿಡಿಯೋ ಅನಾಲಿಸ್ಟ್ ಸ್ಯಾಲರಿಯನ್ನ ಡಬಲ್ ಮಾಡಲು ನಿರ್ಧರಿಸಲಾಗಿದೆ. ನೂತನ ನಿಯಮದ ಪ್ರಕಾರ ಪ್ರಥಮ ದರ್ಜೆ, ಮೂರು ದಿನದ ಪಂದ್ಯ ಹಾಗೂ 50 ಓವರ್‌ಗಳ ಏಕದಿನ ಪಂದ್ಯದ ಕ್ರಿಕೆಟ್ ಅಂಪೈರ್‌ಗಳಿಗೆ ಪ್ರತಿ ದಿನ 40 ಸಾವಿರ ರೂಪಾಯಿ ನೀಡಲು ತೀರ್ಮಾನಿಸಲಾಗಿದೆ. ಟಿ-ಟ್ವೆಂಟಿ ಪಂದ್ಯಗಳಿಗೆ 10ಸಾವಿರದಿಂದ 20 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ ಮ್ಯಾಚ್ ರೆಫ್ರಿಗಳಿಗೆ ಪ್ರಥಮ ದರ್ಜೆ, ಮೂರು ದಿನದ ಪಂದ್ಯ ಹಾಗೂ 50 ಓವರ್‌ಗಳ ಏಕದಿನ ಪಂದ್ಯಗಳ 30 ಸಾವಿರ ಹಾಗೂ ಟಿ-ಟ್ವೆಂಟಿ ಮ್ಯಾಚ್ ರೆಫ್ರಿಗೆ 15 ಸಾವಿರ ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಬಿಸಿಸಿಐ ಸ್ಕೋರರ್‌ಗಳಿಗೆ ಇನ್ಮುಂದೆ ಪ್ರತಿ ಪಂದ್ಯಕ್ಕೆ 10 ಸಾವಿರ ಹಾಗೂ ಟಿ-ಟ್ವೆಂಟಿ ಪಂದ್ಯಗಳಿಗೆ 5 ಸಾವಿರ ರೂಪಾಯಿ ಪಡೆಯಲಿದ್ದಾರೆ. 


ನವದೆಹಲಿಯಲ್ಲಿ ಸಭೆ ಸೇರಿದ ಬಿಸಿಸಿಐ ಕ್ರಿಕೆಟ್ ಸಮಿತಿ ಹಾಗೂ ಸಿಒಎ ಸಂಭಾವನೆ ಹೆಚ್ಚಿಸಲು ನಿರ್ಧರಿಸಿದೆ. ಆದರೆ ಬಿಸಿಸಿಐ ಖಜಾಂಚಿ ಅನಿರುಧ್ ಚೌಧರಿಗೆ ಸ್ಯಾಲರಿ ಹೆಚ್ಚಳ ವಿಚಾರ ಗೊತ್ತೇಇಲ್ಲ. ಹೀಗಾಗಿ ಈ ಪ್ರಸ್ತಾಪ ಬಿಸಿಸಿಐನಲ್ಲಿ ಮುಸುಕಿನ ಗುದ್ದಾಟಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.