ಈ ಮುಂಚೆ ರಣಜಿ ಟ್ರೋಫಿಯಲ್ಲಿ ತಲಾ 9 ತಂಡಗಳಿರುವ ಮೂರು ಗುಂಪುಗಳಿದ್ದವು. ಇದೀಗ ತಲಾ 7 ತಂಡಗಳಿರುವ 4 ಗುಂಪುಗಳನ್ನು ರಚಿಸಲು ನಿರ್ಧರಿಸಲಾಗಿದೆ. ಪ್ರತೀ ತಂಡಕ್ಕೆ 2 ಪಂದ್ಯಗಳ ಹೊರೆ ಕಡಿಮೆಯಾಗಲಿದೆ. ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ಕನಿಷ್ಠ 4 ದಿನಗಳ ಅಂತರ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ಇದು ಆಟಗಾರರಿಗೆ, ಅದರಲ್ಲೂ ವೇಗದ ಬೌಲರ್'ಗಳಿಗೆ ನಿರಾಳ ತರಿಸುವ ಸುದ್ದಿಯಾಗಿದೆ.
ಮುಂಬೈ(ಆ. 25): ಭಾರತೀಯ ಕ್ರಿಕೆಟಿಗರ ಪಾಲಿಗೆ ನುಂಗಲೂ ಆಗದ, ಉಗುಳಲೂ ಆಗದಂತಿದ್ದ ರಣಜಿ ಟ್ರೋಫಿಯಲ್ಲಿ ಕೊನೆಗೂ ಬದಲಾವಣೆಯಾಗಿದೆ. ಇನ್ಮುಂದೆ ಹೊಸ ಫಾರ್ಮ್ಯಾಟ್'ನಲ್ಲಿ ರಣಜಿ ಟ್ರೋಫಿ ನಡೆಯಲಿದೆ. ವೀರೇಂದ್ರ ಸೆಹ್ವಾಗ್ ಮೊದಲಾದವರು ಮಾಡಿದ ಒತ್ತಾಯಕ್ಕೆ ಬಿಸಿಸಿಐ ಮಣಿದು ರಣಜಿ ಕ್ರಿಕೆಟ್'ಗೆ ನೂತನ ರೂಪುರೇಖೆ ಹಾಕಿದೆ. ಹೊಸ ಫಾರ್ಮ್ಯಾಟ್'ನಲ್ಲಿ ತಂಡವೊಂದು ಆಡುವ ಪಂದ್ಯಗಳ ಪ್ರಮಾಣ ಕಡಿಮೆಯಾಗಲಿದೆ. ಹಾಗೂ ಪ್ರತೀ ತಂಡವೂ ತಾನು ಆಡುವ ಪಂದ್ಯಗಳ ನಡುವಿನ ಅಂತರ ಹೆಚ್ಚಾಗಲಿದೆ.
ಹೊಸ ಫಾರ್ಮ್ಯಾಟ್ ಹೇಗೆ?
1) ತಲಾ 7 ತಂಡಗಳಿರುವ 4 ಗುಂಪು
2) ಪಂದ್ಯದಿಂದ ಪಂದ್ಯಕ್ಕೆ ಕನಿಷ್ಠ 4 ದಿನಗಳ ಅಂತರ
ಈ ಮುಂಚೆ ರಣಜಿ ಟ್ರೋಫಿಯಲ್ಲಿ ತಲಾ 9 ತಂಡಗಳಿರುವ ಮೂರು ಗುಂಪುಗಳಿದ್ದವು. ಇದೀಗ ತಲಾ 7 ತಂಡಗಳಿರುವ 4 ಗುಂಪುಗಳನ್ನು ರಚಿಸಲು ನಿರ್ಧರಿಸಲಾಗಿದೆ. ಪ್ರತೀ ತಂಡಕ್ಕೆ 2 ಪಂದ್ಯಗಳ ಹೊರೆ ಕಡಿಮೆಯಾಗಲಿದೆ. ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ಕನಿಷ್ಠ 4 ದಿನಗಳ ಅಂತರ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ಇದು ಆಟಗಾರರಿಗೆ, ಅದರಲ್ಲೂ ವೇಗದ ಬೌಲರ್'ಗಳಿಗೆ ನಿರಾಳ ತರಿಸುವ ಸುದ್ದಿಯಾಗಿದೆ.
ವೀರೂ ಸಲಹೆ:
ನಾಲ್ಕು ದಿನಗಳ ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ಕೊಟ್ಟಿದ್ದು ವೀರೇಂದ್ರ ಸೆಹ್ವಾಗ್. ರಣಜಿ ಸೀಸನ್'ನಲ್ಲಿ ಬಿಡುವಿಲ್ಲದ ಕ್ರಿಕೆಟ್'ನಿಂದ ಆಟಗಾರರ ಮೇಲೆ ವಿಪರೀತ ಒತ್ತಡವಾಗುತ್ತಿದೆ. ಪಂದ್ಯಗಳ ಪ್ರಮಾಣ ಕಡಿಮೆ ಮಾಡಿದರೆ, ಹಾಗೂ ಪಂದ್ಯಗಳ ನಡುವಿನ ಅಂತರ ಹೆಚ್ಚಿಸಿದರೆ ಒಳ್ಳೆಯದಾಗುತ್ತದೆ ಎಂಬುದು ಸೆಹ್ವಾಗ್ ಸೇರಿದಂತೆ ಅನೇಕರ ಅಭಿಪ್ರಾಯವಾಗಿತ್ತು. 2019ರ ವಿಶ್ವಕಪ್ ಇರುವ ಹಿನ್ನೆಲೆಯಲ್ಲಿ ಆಟಗಾರರು ಗಾಯದ ಸಮಸ್ಯೆಗೆ ಸಿಲುಕಬಾರದೆಂಬ ಉದ್ದೇಶದಿಂದ ಬಿಸಿಸಿಐ ಈಗಲೇ ಎಚ್ಚೆತ್ತುಕೊಂಡು ರಣಜಿ ಟ್ರೋಫಿಯಲ್ಲಿ ಈ ಮೇಲಿನ ಬದಲಾವಣೆ ತಂದಿರುವ ಸಾಧ್ಯತೆ ಇದೆ.
ವೇಳಾಪಟ್ಟಿ:
ಈ ಋತುವಿನ ರಣಜಿ ಟ್ರೋಫಿಯು ಅಕ್ಟೋಬರ್ 6ರಿಂದ ಪ್ರಾರಂಭವಾಗುತ್ತದೆ. ನಾಲ್ಕು ಗುಂಪುಗಳ ಲೀಗ್'ನಲ್ಲಿ ಪ್ರತೀ ಗುಂಪಿನಲ್ಲಿ ಟಾಪ್ 2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್'ಫೈನಲ್'ಗೆ ಅರ್ಹತೆ ಪಡೆಯುತ್ತವೆ. ಡಿಸೆಂಬರ್ 7-11ಕ್ಕೆ ಕ್ವಾರ್ಟರ್'ಫೈನಲ್ಸ್ ನಡೆಯಲಿದೆ. ಡಿಸೆಂಬರ್ 17-21 ಸೆಮಿಫೈನಲ್ಸ್ ಹಾಗೂ ಡಿಸೆಂಬರ್ 29ರಿಂದ ಜನವರಿ 2ರವರೆಗೆ ಫೈನಲ್ ಪಂದ್ಯ ನಡೆಯಲಿದೆ.
ಇದೇ ವೇಳೆ, ಅಂಡರ್-23 ಕ್ರಿಕೆಟಿಗರಿಗಾಗಿ ಏಕದಿನ ಕ್ರಿಕೆಟ್ ಟೂರ್ನಿ ನಡೆಸಬೇಕೆಂದು ಮುಂಬೈ ಕ್ರಿಕೆಟ್ ಸಂಸ್ಥೆ ಮಾಡಿಕೊಂಡ ಮನವಿಗೂ ಬಿಸಿಸಿಐ ಓಗೊಟ್ಟಿದೆ. ಕರ್ನಲ್ ಸಿಕೆ ನಾಯ್ಡು ಟ್ರೋಫಿ ಹೆಸರಿನಲ್ಲಿ ಈ ಟೂರ್ನಿ ನಡೆಯಲಿದೆ.