ನವ​ದೆ​ಹ​ಲಿ(ಅ.04): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಗಲೀ ಇಲ್ಲವೇ ಅದನ್ನು ಮುನ್ನಡೆಸುವ ಅಧಿಕಾರಿಗಳ ವರ್ಗವೇ ಆಗಲೀ ಕ್ರಿಕೆಟ್‌ಗಿಂತ ಮೇಲಲ್ಲ ಎಂದು ಪುನರುಚ್ಚರಿಸಿರುವ ನ್ಯಾ. ಆರ್‌.ಎಂ. ಲೋಧಾ ಸಮಿತಿ, ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್‌ ಸರಣಿಗೆ ಯಾವುದೇ ಬಾಧಕವಿಲ್ಲ ಅದು ನಿರಾತಂಕವಾಗಿ ನಡೆಯಬಹುದು ಎಂದು ಸ್ಪಷ್ಟಪಡಿಸಿದೆ.

ಬಿಸಿಸಿಐ ಬ್ಯಾಂಕ್‌ ವಹಿವಾಟಿಗೆ ಲೋಧಾ ಸಮಿತಿ ತಡೆಯೊಡ್ಡಿರುವುದು ದುರದೃಷ್ಟಕರವಾಗಿದ್ದು, ಇದು ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್‌ ಸರಣಿಯ ಮೇಲೂ ಕರಿನೆರಳು ಬೀರಿದೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಅಳಲು ತೋಡಿಕೊಂಡ ಬೆನ್ನಲ್ಲೇ ಲೋಧಾ ಈ ಸ್ಪಷ್ಟನೆ ನೀಡಿದ್ದಾರೆ.

ಭಾರ​ತೀಯ ಕ್ರಿಕೆಟ್‌ ಮಂಡ​ಳಿಯ (ಬಿ​ಸಿ​ಸಿ​ಐ) ಯಾವುದೇ ಬ್ಯಾಂಕ್‌ ವಹಿವಾಟನ್ನು ಸಂಪೂ​ರ್ಣ​ವಾಗಿ ಸ್ಥಗಿ​ತ​ಗೊ​ಳಿ​ಸಲು ಸೂಚನೆ ನೀಡಿ​ಲ್ಲ​, ಬದಲಿಗೆ, ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ನೀಡಲಾಗುವ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸದಂತೆ ನಿರ್ದೇಶಿಸಲಾಗಿದೆ ಎಂದೂ ಲೋಧಾ ಸಮಿತಿ ತಿಳಿಸಿದೆ.

ಬಿಸಿಸಿಐ ದೇಶದ 30 ಕ್ರಿಕೆಟ್‌ ಸಂಸ್ಥೆಗಳಿಗೆ ಒಟ್ಟಾರೆ 500 ಕೋಟಿ​ಯಷ್ಟು ಹಣ​ವನ್ನು ನೀಡಲು ಸೆ. 30ರಂದು ನಡೆ​ದಿದ್ದ ತನ್ನ ತುರ್ತು ಸಭೆ​ಯಲ್ಲಿ ನಿರ್ಧ​ರಿ​ಸಿತ್ತು. ಆದರೆ, ಇಂದು ಈ ಬಗ್ಗೆ ಸ್ಪಷ್ಟನೆ ಸಮಿತಿ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದೆ.

ಹಣವಿದ್ದರಷ್ಟೇ ಕ್ರಿಕೆಟ್‌

‘‘ಭಾರ​ತ ಹಾಗೂ ನ್ಯೂಜಿ​ಲೆಂಡ್‌ ನಡು​ವಿನ ಕ್ರಿಕೆಟ್‌ ಸರ​ಣಿಯ ಪಂದ್ಯ​ಗಳ ಆಯೋ​ಜನಾ ಹೊಣೆ​ಯನ್ನು ನಾನಾ ರಾಜ್ಯ ಸಂಸ್ಥೆ​ಗಳು ಹೊತ್ತಿವೆ. ಪಂದ್ಯ​ಗಳ ಆಯೋ​ಜ​ನೆಗಾಗಿ ಆ ಸಂಸ್ಥೆ​ಗ​ಳಿಗೆ ಹಣ ನೀಡ​ದಿ​ದ್ದರೆ ಕಷ್ಟ​ವಾ​ಗು​ತ್ತದೆ. ಈಗಾ​ಗಲೇ ಕೆಲ ಅಧೀನ ಸಂಸ್ಥೆ​ಗಳು ಲೋಧಾ ಸಮಿ​ತಿಯ ಕ್ರಮ​ದಿಂದ ಪಂದ್ಯ​ಗ​ಳನ್ನು ಆಯೋ​ಜಿ​ಸು​ವುದು ಕಷ್ಟ​ವಾ​ಗಿದೆ ಎಂದು ಅಲ​ವ​ತ್ತು​ಕೊಂಡಿವೆ. ಇಷ್ಟಕ್ಕೂ ನಾವು ಹಣವಿಲ್ಲದೆ ಕ್ರಿಕೆಟ್‌ ನಡೆಸಲು ಸಾಧ್ಯವಿಲ್ಲ’’ ಎಂದು ಠಾಕೂರ್‌ ಹೇಳಿದ್ದರು.

‘‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ನಂ.1 ಸ್ಥಾನದಲ್ಲಿದ್ದರೆ, ಚುಟುಕು ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಅಂತೆಯೇ ಏಕದಿನ ಪ್ರಕಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಸಿಸಿಐ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾದ ಕ್ರಿಕೆಟ್‌ ಮಂಡಳಿ. ಐಪಿಎಲ್‌ನಂಥ ಒಂದು ಕ್ರಿಯಾತ್ಮಕವಾದ ಹಾಗೂ ಲಾಭದಾಯಕವಾದ ಯಶಸ್ವಿ ಟೂರ್ನಿಯನ್ನು ಹುಟ್ಟುಹಾಕಿದ ಕೀರ್ತಿ ಬಿಸಿಸಿಐಗಿದೆ. ಇದೆಲ್ಲಾ ಹಣದಿಂದಲೇ ಸಾಧ್ಯವಾಯಿತು’’ ಎಂದು ಠಾಕೂರ್‌ ತಿಳಿಸಿದ್ದರು.