ಬೆಂಗಳೂರು ಬುಲ್ಸ್‌ನ ಹೊಸ ಕೋಚ್ ಆಗಿ ಅರ್ಜುನ ಪ್ರಶಸ್ತಿ ವಿಜೇತ ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ನೇಮಕ. ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಬುಲ್ಸ್, ಹಿಂದಿನ ಕೋಚ್ ರಣ್ದೀರ್ ಸಿಂಗ್ ಸೆಹ್ರಾವತ್ ಅವರನ್ನು ಬದಲಿಸಿದೆ. ರಮೇಶ್ ಕುಮಾರ್ ಈ ಹಿಂದೆ ಬುಲ್ಸ್‌ಗೆ ಪ್ರಶಸ್ತಿ ತಂದುಕೊಟ್ಟಿದ್ದರು.

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಕನ್ನಡಿಗ ಬಿ.ಸಿ, ರಮೇಶ್ ಕುಮಾರ್ ಮುಂಬರುವ ಪಿಕೆಎಲ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಹೆಡ್‌ ಕೋಚ್ ಆಗಿ ನೇಮಕವಾಗಿದ್ದಾರೆ. ಕಳೆದೊಂದು ದಶಕದಿಂದ ಬೆಂಗಳೂರು ಬುಲ್ಸ್ ತಂಡದ ಹೆಡ್ ಕೋಚ್ ಅಗಿ ಕಾರ್ಯ ನಿರ್ವಹಿಸಿದ್ದ ರಣ್ದೀರ್ ಸಿಂಗ್ ಸೆಹ್ರಾವತ್ ಅವರು ಇದೀಗ ಬುಲ್ಸ್ ಹೆಡ್‌ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಹೌದು, 2024ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಮುಖಭಂಗ ಅನುಭವಿಸಿತ್ತು. ಬೆಂಗಳೂರು ಬುಲ್ಸ್ ತಂಡವು ರಣ್ದೀರ್ ಸಿಂಗ್ ಸೆಹ್ರಾವತ್ ಮಾರ್ಗದರ್ಶನದಲ್ಲಿ ಆಡಿದ 22 ಪಂದ್ಯಗಳಲ್ಲಿ ಕೇವಲ 2 ಗೆಲುವು 19 ಸೋಲು ಹಾಗೂ ಒಂದು ಟೈ ಪಂದ್ಯದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ತನ್ನ ಅಭಿಯಾನವನ್ನು ಮುಗಿಸಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಬುಲ್ಸ್ ಮ್ಯಾನೇಜ್‌ಮೆಂಟ್ ಮೇಜರ್‌ ಸರ್ಜರಿ ಮಾಡಿದ್ದು, ಹೆಡ್‌ಕೋಚ್ ತಲೆದಂಡವಾಗಿದೆ.

Scroll to load tweet…

ಚೊಚ್ಚಲ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಿಂದಲೂ ರಣ್ದೀರ್ ಸಿಂಗ್ ಸೆಹ್ರಾವತ್ ಬೆಂಗಳೂರು ಬುಲ್ಸ್ ತಂಡದ ಭಾಗವಾಗಿದ್ದರು. ರಣ್ದೀರ್ ಸಿಂಗ್ ಮಾರ್ಗದರ್ಶನದಲ್ಲಿ ಬೆಂಗಳೂರು ಬುಲ್ಸ್ ತಂಡವು ಆರು ಬಾರಿ ಪ್ಲೇ ಆಫ್ ಪ್ರವೇಶಿಸಿತ್ತು. 2018-19ರಲ್ಲಿ ರಣ್ದೀರ್ ಸಿಂಗ್ ಹೆಡ್ ಕೋಚ್ ಆಗಿದ್ದಾಗ ಬೆಂಗಳೂರು ಬುಲ್ಸ್ ತಂಡವು ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಟ್ರೋಫಿ ಜಯಿಸಿತ್ತು. ಆಗ ಬಿ.ಸಿ. ರಮೇಶ್ ಕುಮಾರ್ ಬೆಂಗಳೂರು ಬುಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಕನ್ನಡಿಗ ಕೋಚ್‌ ಈಗ ಬುಲ್ಸ್ ಪಾಲಿನ ದ್ರೋಣಾಚಾರ್ಯ:

ಹೌದು, ಮುಂಬರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ಅವರು ಬೆಂಗಳೂರು ಬುಲ್ಸ್ ತಂಡದ ಹೆಡ್‌ಕೋಚ್ ಆಗಿ ನೇಮಕವಾಗಿದ್ದಾರೆ. 2018ರಲ್ಲಿ ಬಿ.ಸಿ. ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿಯೇ ಬೆಂಗಳೂರು ಬುಲ್ಸ್ ತಂಡವು ಮೊದಲ ಬಾರಿಗೆ ಪಿಕೆಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಇದಷ್ಟೇ ಅಲ್ಲದೇ ಬಿ.ಸಿ. ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಪುಣೇರಿ ಪಲ್ಟನ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದವು. ಇದೀಗ ರಮೇಶ್ ಕುಮಾರ್ ಆಗಮನ ಬೆಂಗಳೂರು ಬುಲ್ಸ್ ಪಾಳಯದಲ್ಲಿ ಹೊಸ ಹುರುಪು ಮೂಡುವಂತೆ ಮಾಡಿದೆ.