ಮೀರ್‌​ಪು​ರ(ಆ.02): ಪ್ರವಾಸಿ ಆಷ್ಘಾ​ನಿ​ಸ್ತಾನ ವಿರು​ದ್ಧದ ಏಕ​ದಿನ ಸರ​ಣಿ​ಯಲ್ಲಿ ಆತಿ​ಥೇಯ ಬಾಂಗ್ಲಾ​ದೇಶ ಗೆಲವು ಕಂಡಿದೆ. ಶನಿ​ವಾರ ತಡ​ರಾತ್ರಿ ಮುಗಿದ ಸರ​ಣಿಯ ಮೂರನೇ ಪಂದ್ಯ​ದಲ್ಲಿ ಆಷ್ಘಾ​ನಿ​ಸ್ತಾ​ನ​ದ ವಿರುದ್ಧ ಬಾಂಗ್ಲಾ​ದೇಶ 141 ರನ್‌​ಗಳ ಜಯ ಕಂಡಿ​ತು. ಈ ಮೂಲಕ ಮೂರು ಪಂದ್ಯ​ಗಳ ಸರ​ಣಿ​ಯಲ್ಲಿ ಬಾಂಗ್ಲಾ​ದೇಶ, 2-1 ಅಂತ​ರ​ದಲ್ಲಿ ಜಯ ಸಾಧಿ​ಸಿತು.

ಇಲ್ಲಿನ ಶೇರ್‌-ಎ-ಬಾಂಗ್ಲಾ ಕ್ರೀಡಾಂಗ​ಣ​ದಲ್ಲಿ ನಡೆದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ, ನಿಗದಿತ 50 ಓವ​ರ್‌​ಗ​ಳಲ್ಲಿ 8 ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿ​ಸಿತ್ತು. ಈ ಮೊತ್ತ​ವನ್ನು ಬೆನ್ನ​ಟ್ಟಲು ಕ್ರೀಸ್‌ಗೆ ಇಳಿದ ಆಷ್ಘಾ​ನಿ​ಸ್ತಾನ, 33.5 ಓವ​ರ್‌​ಗ​ಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆ​ದು​ಕೊಂಡು 138 ರನ್‌ ಮಾತ್ರ ಗಳಿ​ಸಿತು. ಸರ​ಣಿಯ ಮೊದ​ಲೆ​ರಡು ಪಂದ್ಯ​ಗ​ಳಲ್ಲಿ ಎರಡೂ ತಂಡ​ಗಳು ತಲಾ ಒಂದೊಂದನ್ನು ಗೆದ್ದು 1-1ರ ಸಮ​ಬಲ ಸಾಧಿ​ಸಿ​ದ್ದವು. ಹೀಗಾಗಿ, ಮೂರನೇ ಪಂದ್ಯ ಸಾಕಷ್ಟುಕುತೂ​ಹಲ ಕೆರ​ಳಿ​ಸಿತ್ತು. ಅಂತಿ​ಮ​ ಪಂದ್ಯ​ದಲ್ಲಿ ಆ ಪಂದ್ಯ​ದಲ್ಲೂ ಜಯ ಸಾಧಿ​ಸು​ವು​ದ​ರೊಂದಿಗೆ ಬಾಂಗ್ಲಾ​ದೇಶ ತವ​ರಿ​ನಲ್ಲಿ ಮುಖ​ಭಂಗ​ಕ್ಕೊ​ಳ​ಗಾ​ಗುವ ಪ್ರಮೇಯ ತಪ್ಪಿ​ಸಿ​ಕೊಂಡಿತು.

ಶನಿ​ವಾ​ರದ ಪಂದ್ಯ​ದಲ್ಲಿ, ಮೊದ​ಲಿಗೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು​ಕೊಂಡ ಬಾಂಗ್ಲಾ​ದೇ​ಶವು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌​ಮ​ನ್‌​ಗಳ ವೈಫಲ್ಯ ಕಂಡಿ​ತಾ​ದರೂ, ಆರಂಭಿಕ ತಮೀಮ್‌ ಇಕ್ಬಾಲ್‌ ಅವರ ಆಕ​ರ್ಷಕ ಶತಕದ (118 ರನ್‌, 118 ಎಸೆತ, 11 ಬೌಂಡರಿ, 2 ಸಿಕ್ಸ​ರ್‌) ಹಾಗೂ ಮಧ್ಯಮ ಕ್ರಮಾಂಕದ ಶಬ್ಬೀರ್‌ ರಹ​ಮಾನ್‌ ಅವರ ಅರ್ಧ​ಶ​ತ​ಕದ (65 ರನ್‌, 79 ಎಸೆತ, 6 ಬೌಂಡರಿ, 3 ಸಿಕ್ಸ​ರ್‌​) ದೆಸೆ​ಯಿಂದಾಗಿ ಬಾಂಗ್ಲಾ​ದೇ​ಶವು ಸವಾ​ಲಿನ ಮೊತ್ತ ಪೇರಿ​ಸು​ವಲ್ಲಿ ಯಶ​ಸ್ವಿ​ಯಾ​ಯಿತು. ಆದರೆ, ಈ ಸವಾ​ಲನ್ನು ಬೆನ್ನ​ಟ್ಟಲು ಕ್ರೀಸಿ​ಗಿ​ಳಿದ ಆಷ್ಘಾ​ನಿ​ಸ್ತಾನವು ಆರಂಭಿ​ದಿಂದಲೇ ಎಡವುತ್ತಾ ಸಾಗಿತು.

ಆರಂಭಿಕ ಮೊಹ​ಮ್ಮದ್‌ ಶಾಬಾಜ್‌ ಶೂನ್ಯಕ್ಕೆ ಔಟಾ​ದರು. ಮತ್ತೊಬ್ಬ ಆರಂಭಿಕ ನವ್ರೋಜ್‌ ಮಂಗಲ್‌, ರಹ​ಮತ್‌ ಶಾ ಜೋಡಿ ಇನಿಂಗ್ಸ್‌ ಮೇಲೆ​ತ್ತಲು ಕೊಂಚ ಯತ್ನಿ​ಸಿ​ದ​ರೂ 47 ರನ್‌ ಜತೆ​ಯಾಟದ ನಂತರ ಈ ಜೋಡಿ ಬೇರ್ಪ​ಡುವ ಮೂಲಕ ಆಷ್ಘಾ​ನಿ​ಸ್ತಾನ ಇನಿಂಗ್ಸ್‌ ಅವ​ನ​ತಿ​ಯತ್ತ ಸಾಗಿತು. ಆನಂತರ ಬಂದ​ವ​ರಲ್ಲಿ ಯಾರೂ ಜಿಗು​ಟು​ತನ ತೋರದ ಫಲ​ವಾಗಿ ಪ್ರವಾ​ಸಿ​ಗರು ದಯ​ನೀಯ ಸೋಲು ಕಾಣ​ಬೇ​ಕಾ​ಯಿತು.

ಆತಿ​ಥೇಯ ತಂಡದ ಸ್ಪಿನ್ನರ್‌ ಮೊಹ​ಮ್ಮದ್‌ ಹುಸೇನ್‌ 3 ವಿಕೆಟ್‌ ಕಬ​ಳಿ​ಸಿ​ದರೆ, ವೇಗಿ ಟಸ್ಕಿನ್‌ ಅಹ್ಮದ್‌ 2 ವಿಕೆಟ್‌ ಪಡೆ​ದು ಎದು​ರಾಳಿ ತಂಡದ ಶೀಘ್ರ ಪತ​ನ​ದಲ್ಲಿ ಪ್ರಮುಖ ಪಾತ್ರ ವಹಿ​ಸಿ​ದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾ​ದೇಶ 50 ಓವ​ರ್‌​ಗ​ಳಲ್ಲಿ 8 ವಿಕೆ​ಟ್‌ಗೆ 279 (ತ​ಮೀಮ್‌ ಇಕ್ಬಾಲ್‌ 118, ಶಬ್ಬೀರ್‌ 65; ರಶೀದ್‌ ಖಾನ್‌ 39ಕ್ಕೆ 2, ಮೊಹ​ಮ್ಮದ್‌ ನಬಿ 41ಕ್ಕೆ 2); ಆ​ಷ್ಘಾ​ನಿ​ಸ್ತಾನ 33.5 ಓವ​ರ್‌​ಗ​ಳಲ್ಲಿ 138 (ರ​ಹ್ಮತ್‌ ಶಾ 36, ನವ್ರೋಜ್‌ ಮಂಗಲ್‌ 33; ಮೊಶ​ರಫ್‌ ಹುಸೇನ್‌ 24ಕ್ಕೆ 3, ಟಸ್ಕಿನ್‌ ಅಹ್ಮದ್‌ 31ಕ್ಕೆ 2). ಪಂದ್ಯ ಹಾಗೂ ಸರಣಿ ಶ್ರೇಷ್ಠ: ತಮೀಮ್‌ ಇಕ್ಬಾ​ಲ್‌ (ಬಾಂಗ್ಲಾ​ದೇ​ಶ)