ಬೆಂಗಳೂರು[ಜು.30]: ಸಾಧಿಸಬೇಕು ಎಂಬ ಛಲವಿದ್ದರೆ ಯಾವುದೇ ದೊಡ್ಡ ಅಡೆತಡೆಗಳು ಬಂದರೂ ಅವನ್ನೆಲ್ಲಾ ದಾಟಿ ಮುನ್ನುಗ್ಗಬಹುದು. ಅದಕ್ಕೆ ಜೀವಂತ ಉದಾಹರಣೆ ಮೈಸೂರಿನ ಈಶ್ವರ್. ಆಟೋ ಓಡಿಸಿಕೊಂಡು, ರೈಲ್ವೆ ಸ್ಟೇಷನ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡು ಇಂದು ದೇಶದ ಪವರ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿ, ಇದುವರೆಗೂ 50 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ

ಆಟೋ ಓಡಿಸಿಕೊಂಡು, ಬೆಂಗಳೂರು ರೈಲ್ವೆ ಸ್ಟೇಷನ್‌ನಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನದ ಬಂಡಿ ಸಾಗಿಸುತ್ತಿರುವ ಮೈಸೂರಿನ ಈಶ್ವರ್ ಎನ್. ಸಾಧನೆಯನ್ನು ಕಂಡರೆ ಆಶ್ವರ್ಯವಾಗುವುದು ಖಚಿತ. ಸಾಮಾನ್ಯ ಆಟೋ ಡ್ರೈವರ್ ಒಬ್ಬ ರಾಷ್ಟ್ರ ಮಟ್ಟದ ಪವರ್‌ಲಿಫ್ಟರ್. ಇದುವರೆಗೂ 50 ಗೋಲ್ಡ್ ಮೆಡಲ್‌ಗಳನ್ನು ಪಡೆದಿದ್ದಾರೆ ಎಂದರೆ ನೀವು ನಂಬಲೇಬೇಕು.ಪಿಯುಸಿಗೆ ಓದು ನಿಲ್ಲಿಸಿ ಆಟೋ ಓಡಿಸುವುದನ್ನು ವೃತ್ತಿಯಾಗಿಸಿಕೊಂಡ ಈಶ್ವರ್ ಸತತ ಇಪ್ಪತ್ತೈದು ವರ್ಷಗಳಿಂದ ಪವರ್‌ಲಿಫ್ಟಿಂಗ್ ಅನ್ನು ಫ್ಯಾಷನ್ ಆಗಿ ತೆಗೆದುಕೊಂಡಿದ್ದಾರೆ. ಅದರ ಫಲವಾಗಿ ಅವರಿಂದು ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯ ವಿಜೇತ.

‘ಮೈನೆ ಪ್ಯಾರ್ ಕಿಯಾ’ ಸ್ಫೂರ್ತಿ 
ಅಷ್ಟಕ್ಕೂ ಈಶ್ವರ್ ಅವರಿಗೆ ಪವರ್ ಲಿಫ್ಟಿಂಗ್ ಬಗ್ಗೆ ಏಕಾಏಕಿ ಆಸಕ್ತಿ ಉಂಟಾಗಿ ಇದನ್ನು ಪ್ರವೃತ್ತಿಯಾಗಿ ತೆಗೆದುಕೊಳ್ಳಲು ಸಲ್ಮಾನ್ ಖಾನ್ ಅಭಿನಯದ ‘ಮೈನೆ ಪ್ಯಾರ್ ಕಿಯಾ’ ಚಿತ್ರವೇ ಸ್ಫೂರ್ತಿ. ಈ ಚಿತ್ರವನ್ನು ನೋಡಿ ನಾನೂ ಯಾಕೆ ಸಲ್ಮಾನ್ ಖಾನ್ ರೀತಿ ಬಾಡಿ ಬಿಲ್ಡ್ ಮಾಡಬಾರದು ಎಂದುಕೊಂಡು ಜಿಮ್‌ಗೆ ಸೇರುತ್ತಾರೆ. ಜಿಮ್ ಮಾಡುತ್ತಾ ಮಾಡುತ್ತಾ ಪವರ್
ಲಿಫ್ಟಿಂಗ್ ಕಡೆಗೆ ಮನಸ್ಸು ವಾಲಿದ ಪರಿಣಾಮ ಅವರಿಂದು ರಾಷ್ಟ್ರ ಮಟ್ಟದ ಪವರ್‌ಲಿಫ್ಟರ್. ಅವರ  ಸತತ ಇಪ್ಪತ್ತೈದು ವರ್ಷದ ಫಲಕ್ಕೆ ಸಿಕ್ಕಿರುವುದು 50 ಚಿನ್ನದ ಪದಗಳು ಮತ್ತು ರಾಷ್ಟ್ರೀಯ ಗೌರವ.

ಬಡತನದ ಬದುಕು
ತಂದೆ ತಾಯಿ ವೀಳ್ಯದ ಎಲೆ ಮಾರಿ ಜೀವನ ಸಾಗಿಸುತ್ತಿದ್ದ ದಿನಗಳವು. ಆ ಸಂದರ್ಭದಲ್ಲಿ ಜಿಮ್ ಮಾಡಬೇಕು, ಬಾಡಿ ಬಿಲ್ಡ್ ಮಾಡಬೇಕು ಎಂದರೆ ಸುಲಭದ ಮಾತಲ್ಲ. ಮಾಡುವುದಕ್ಕೆ ಕೆಲಸವೇ ತುಂಬಾ ಇದೆ. ದುಡಿಯದೇ ಇದ್ದರೆ ಜೀವನ ಸುಲಭಕ್ಕೆ ಸಾಗುವುದಿಲ್ಲ. ಹೀಗಿರುವಾಗ ಜಿಮ್ ಬಾಡಿ ಬಿಲ್ಡ್ ಇದೆಲ್ಲಾ ಉಳ್ಳವರ ಮಾತು ಎಂದು ಮನೆಯವರೆಲ್ಲಾ ಹೇಳಿದರೂ, ನಾನು ನಿದ್ದೆ ಮಾಡುವ ಸಮಯವನ್ನು ಕಡಿಮೆ ಮಾಡಿ ಜಿಮ್ ಸೇರುತ್ತೇನೆ ಎಂದು ತಾಲೀಮು ನಡೆಸುತ್ತಾರೆ ಈಶ್ವರ್.

ಎರಡು ಕಡೆ ಕೆಲಸ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡು ಅದರ ಜೊತೆಗೆ ಮೈಸೂರಿನಲ್ಲಿ ಆಟೋ ಡ್ರೈವರ್ ಕೂಡ ಆಗಿ ಬದುಕು ಸಾಗಿಸುತ್ತಿರುವ ಈಶ್ವರ್ ಕಳೆದ 15 ವರ್ಷಗಳಿಂದಲೂ ತಮ್ಮ ದೇಹದ ತೂಕವನ್ನು 59 ಕೆಜಿಯಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ಬಂದಿರುವುದು ವಿಶೇಷ. ಪವರ್‌ಲಿಫ್ಟಿಂಗ್ ಸ್ಪರ್ಧೆಗಾಗಿಯೇ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ, ಮೈಸೂರು ಟು ಬೆಂಗಳೂರು ಎರಡೆರಡು ಕಡೆಗಳಲ್ಲಿ ಕೆಲಸ ಮಾಡಿಕೊಂಡು ಈ ಹಂತಕ್ಕೆ ತಲುಪಿದ್ದಾರೆ ಅವರು. ಅಲ್ಲದೇ ಇಂದು ಅವರ ಮನೆಯಲ್ಲಿ ಹೆಂಡತಿಯಿಂದ ಹಿಡಿದು ಇಬ್ಬರು ಮಕ್ಕಳು ಕೂಡ ಪವರ್‌ಲಿಫ್ಟಿಂಗ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎನ್ನುವುದು ಇಂಟರೆಸ್ಟಿಂಗ್ ವಿಚಾರ.