ಸಿಡ್ನಿ(ಆ.19): ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ವೇಗಿ, ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಮಿಚೆಲ್ ಜಾನ್ಸನ್ ಇದೀಗ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.  2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಜಾನ್ಸನ್ ಇದೀಗ ಲೀಗ್ ಟೂರ್ನಿಗೂ ಗುಡ್ ಬೈ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಲೀಗ್ ಟೂರ್ನಿಗಳಲ್ಲಿ ಸಕ್ರಿಯವಾಗಿರಲು ಬಯಸಿದ್ದೆ. ಆದರೆ ಫಿಟ್ನೆಸ್ ಸಮಸ್ಯೆ ಕಾಡುತ್ತಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಬೆನ್ನು ನೋವಿನಿಂದ ಬಳಲಿದ್ದೆ. ಹೀಗಾಗಿ ಸಂಪೂರ್ಣ ಪ್ರಮಾಣದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಇದು ಸೂಕ್ತ ಸಮಯ. ಹೀಗಾಗಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ವಿದಾಯ ಹೇಳುತ್ತಿದ್ದೇನೆ ಎಂದು ಜಾನ್ಸನ್ ಆಸ್ಟ್ರೇಲಿಯಾದ ಖಾಸಗಿ ವೆಬ್‌ಸೈಟ್‌ಗೆ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ ಮಿಚೆಲ್ ಜಾನ್ಸನ್ ಬಿಗ್ ಬ್ಯಾಶ್ ಲೀಗ್ ಟೂರ್ನಿ ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರು. 11ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಜಾನ್ಸನ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. 2018ರ ಐಪಿಎಲ್ ಟೂರ್ನಿಯಲ್ಲಿ 2 ಕೋಟಿ ರೂಪಾಯಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಕೊಂಡ ಜಾನ್ಸನ್ 6 ಪಂದ್ಯ ಆಡಿದ್ದರು. 216 ರನ್ ಬಿಟ್ಟುಕೊಟ್ಟು ಕೇವಲ 2 ವಿಕೆಟ್ ಕಬಳಿಸಿದ್ದರು.