ವೈಜಾಗ್[ಫೆ.24]: ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ಕೊನೆಗೂ ಕೈವಶ ಮಾಡಿಕೊಳ್ಳುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಬಹುತೇಕ ಗೆಲುವಿನ ಹೊಸ್ತಿಲಲ್ಲಿದ್ದ ಪಂದ್ಯವನ್ನು ಕೈಚೆಲ್ಲಿತು. 

ಗೆಲ್ಲಲು 127 ರನ್’ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ ಕೇವಲ 5 ರನ್’ಗಳಾಗುವಷ್ಟರಲ್ಲೇ ಸ್ಟೋನಿಸ್ ಹಾಗೂ ನಾಯಕ ಫಿಂಚ್ ಪೆವಿಲಿಯನ್ ಸೇರಿದರು. ಆ ಬಳಿಕ ಮ್ಯಾಕ್ಸ್’ವೆಲ್-ಡಾರ್ಸಿ ಶಾರ್ಟ್ ಜೋಡಿ ಮೂರನೇ ವಿಕೆಟ್’ಗೆ 84 ರನ್’ಗಳ ಜತೆಯಾಟವಾಡುವ ಮೂಲಕ ಆಸಿಸ್ ಗೆಲುವಿನ ಆಸೆ ಮೂಡಿಸಿದರು. ಮ್ಯಾಕ್ಸ್’ವೆಲ್ 56 ರನ್ ಬಾರಿಸಿ ಆಸಿಸ್’ಗೆ ನೆರವಾದರು. ಆದರೆ ಮ್ಯಾಕ್ಸ್’ವೆಲ್ ವಿಕೆಟ್ ಬೀಳುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಪ್ರವಾಸಿ ತಂಡ 109 ರನ್’ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬುಮ್ರಾ ಕೊನೆಯ ಓವರ್’ನಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು.

ಕೊನೆಯ ಓವರ್ ಗೆಲ್ಲಲು 14 ರನ್: ಕೊನೆಯ ಓವರ್ ಬೌಲಿಂಗ್ ಸಾರಥ್ಯ ಹೊತ್ತ ಉಮೇಶ್ ಯಾದವ್ ಮೊದಲ ಎಸೆತದಲ್ಲಿ 1 ರನ್ ನೀಡಿದರು. ಎರಡನೇ ಎಸೆತದಲ್ಲಿ ಜೆ ರಿಚರ್ಡ್’ಸನ್ ಬೌಂಡರಿ ಬಾರಿಸುವ ಮೂಲಕ ಆಸಿಸ್ ಕಮ್’ಬ್ಯಾಕ್ ಮಾಡಲು ನೆರವಾದರು. ಮೂರನೇ ಎಸೆತದಲ್ಲಿ ಮತ್ತೆರಡು ರನ್ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸಿದ ರಿಚರ್ಡ್’ಸನ್, ಪ್ಯಾಟ್ ಕಮ್ಮಿನ್ಸ್’ಗೆ ಸ್ಟ್ರೈಕ್ ನೀಡಿದರು. ಕೊನೆಯ ಎರಡು ಎಸೆತಗಳಲ್ಲಿ ಆಸಿಸ್ ಗೆಲ್ಲಲು 6 ರನ್’ಗಳ ಅವಶ್ಯಕತೆಯಿತ್ತು. 5ನೇ ಎಸೆತವನ್ನು ಬೌಂಡರಿಗಟ್ಟಿದ ಕಮ್ಮಿನ್ಸ್, ಕೊನೆಯ ಎಸೆತದಲ್ಲಿ 2 ರನ್ ಬಾರಿಸಿ ಆಸಿಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.  

ಇದಕ್ಕೂ ಮೊದಲು ಕನ್ನಡಿಗ ಕೆ.ಎಲ್ ರಾಹುಲ್ ಆಕರ್ಷಕ ಅರ್ಧಶತಕ ಹಾಗೂ ಧೋನಿ ಹಾಗೂ ಕೊಹ್ಲಿಯ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 126 ರನ್ ಬಾರಿಸಿತ್ತು. 

ಸಂಕ್ಷಿಪ್ತ ಸ್ಕೋರ್: 

ಭಾರತ: 126/7
ರಾಹುಲ್: 50

ಆಸ್ಟ್ರೇಲಿಯಾ: 127/7
ಮ್ಯಾಕ್ಸ್’ವೆಲ್: 56