ಹೋಬರ್ಟ್(ನ.15): ಮಧ್ಯಮ ವೇಗಿ ಕೈಲ್ ಅಬ್ಬೋಟ್ ಹಾಗೂ ಕಗಿಸೋ ರಬಾಡಾ ಅವರ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 80 ರನ್‌'ಗಳ ದಯನೀಯ ಸೋಲು ಕಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಸರಣಿಯನ್ನು ಕೈ ವಶ ಮಾಡಿಕೊಂಡಿದೆ. ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲೂ ಹರಿಣಗಳ ಪಡೆ ಜಯ ಸಾಧಿಸಿತ್ತು.

ಭಾರೀ ಕುತೂಹಲ ಕೆರಳಿಸಿದ್ದ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ, ಆಸ್ಟ್ರೇಲಿಯಾ ತಂಡ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 161 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಹರಿಣಗಳ ಪಡೆ ಕಾಂಗರೂ ನೆಲದಲ್ಲಿ 2ನೇ ಜಯ ದುಂದುಭಿ ಮೊಳಗಿಸಿತು. ನ. 3ರಿಂದ 7ರವರೆಗೆ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ ತಂಡ 177 ರನ್‌ಗಳ ಜಯ ಸಾಧಿಸಿತ್ತು. ಸರಣಿಯ ಮೂರನೇ ಪಂದ್ಯವು ನ. 24ರಿಂದ 28ರವರೆಗೆ ನಡೆಯಲಿದ್ದು, ಈ ಪಂದ್ಯ ಔಪಚಾರಿಕವಾಗಿರಲಿದೆ.

ಪಂದ್ಯದ ಮೂರನೇ ದಿನವಾದ ಸೋಮವಾರ ದಿನಾಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 121 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾದ ಇನಿಂಗ್ಸ್ ಅನ್ನು ಖವಾಜಾ ಹಾಗೂ ಸ್ಮಿತ್ ಅವರು ಇನಿಂಗ್ಸ್ ಮುಂದುವರಿಸಿದರು. ಇವರಲ್ಲಿ ಖವಾಜಾ ಅವರನ್ನು ಬೇಗನೇ ಔಟ್ ಮಾಡಿದ ಅಬ್ಬೋಟ್, ಆಸೀಸ್‌ಗೆ ಮೊದಲ ಪೆಟ್ಟು ಕೊಟ್ಟರು. ಇಲ್ಲಿಂದ ದಕ್ಷಿಣ ಆಫ್ರಿಕಾದ ಮ್ಯಾಜಿಕ್ ನಡೆಯಿತು.

ಖವಾಜಾ ನಂತರ ಬಂದ ಕ್ರಿಸ್ ವೋಗ್ಸ್, ರ್ಗ್ಯೂಸನ್, ನೆವಿಲ್, ಮೆನ್ನಿ, ಮಿಚೆಲ್ ಸ್ಟಾರ್ಕ್, ಲಿಯಾನ್ ಎಲ್ಲರೂ ದಕ್ಷಿಣ ಆಫ್ರಿಕಾ ದಾಳಿಗೆ ತರೆಗೆಲೆಗಳಂತೆ ಉದುರಿ ಹೋದರು. ಸೂಕ್ತವಾದ ಬೆಂಬಲವಿಲ್ಲದ ಸ್ಮಿತ್ ವೈಯಕ್ತಿಕವಾಗಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರು ರನ್ ಗಳಿಸಿದ ಹ್ಯಾಜೆಲ್‌ವುಡ್ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 85;

ದಕ್ಷಿಣ ಆಫ್ರಿಕಾ 326;

ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 161

(ಖವಾಜಾ 64, ಸ್ಮಿತ್ 31; ಅಬ್ಬೊಟ್ 77ಕ್ಕೆ 6, ರಬಾಡಾ 34ಕ್ಕೆ 4).