ತನ್ನ ಮೊದಲ ಇನ್ನಿಂಗ್ಸ್ ಹೋರಾಟವನ್ನು ಕೇವಲ 105 ರನ್‌'ಗಳಿಗೇ ಮುಗಿಸಿ ಟೆಸ್ಟ್ ಕ್ರಿಕೆಟ್‌ನಲ್ಲೇ ಎರಡನೇ ಅತ್ಯಂತ ಹೀನಾಯ ಪತನ ಕಂಡಿತು.

ಪುಣೆ(ಫೆ.24): ಸ್ಪಿನ್ ಸ್ನೇಹಿ ಪಿಚ್‌'ನಿಂದಲೇ ಅಜೇಯ 19 ಪಂದ್ಯಗಳನ್ನು ಗೆದ್ದಬೀಗಿದ್ದ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಮೊದಲ ಬಾರಿಗೆ ಆತಿಥೇಯರ ಸ್ಪಿನ್ ಬಲೆಗೆ ಸಿಕ್ಕಿಹಾಕಿಕೊಂಡು ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಮೂಲಕ ಪುಣೆಯಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸಂಪೂರ್ಣ ಹಿಡಿತ ಸಾಧಿಸಿದೆ.

ತನ್ನ ವೃತ್ತಿಬದುಕಿನ ಐದನೇ ಹಾಗೂ ಭಾರತದ ನೆಲದಲ್ಲಿ ತಾನಾಡುತ್ತಿರುವ ಮೊಟ್ಟಮೊದಲ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ಸ್ಟೀವನ್ ಒ’ಕೀಫೆ (35ಕ್ಕೆ 6) ಹೆಣೆದ ಸ್ಪಿನ್ ಬಲೆಯಲ್ಲಿ ಸಿಲುಕಿದ ಕೊಹ್ಲಿ ಬಳಗ, ತನ್ನ ಮೊದಲ ಇನ್ನಿಂಗ್ಸ್ ಹೋರಾಟವನ್ನು ಕೇವಲ 105 ರನ್‌'ಗಳಿಗೇ ಮುಗಿಸಿ ಟೆಸ್ಟ್ ಕ್ರಿಕೆಟ್‌ನಲ್ಲೇ ಎರಡನೇ ಅತ್ಯಂತ ಹೀನಾಯ ಪತನ ಕಂಡಿತು.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 46 ಓವರ್‌ಗಳಲ್ಲಿ 4 ವಿಕೆಟ್‌ಗೆ 143 ರನ್ ಕಲೆಹಾಕಿ ಆ ಮೂಲಕ ಒಟ್ಟು 298 ರನ್ ಮುನ್ನಡೆ ಕಂಡಿದೆ. ಆಟ ನಿಂತಾಗ ನಾಯಕ ಸ್ಟೀವನ್ ಸ್ಮಿತ್ ಹಾಗೂ ಮಿಚೆಲ್ ಮಾರ್ಶ್ ಕ್ರಮವಾಗಿ 59 ಹಾಗೂ 21 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇಬ್ಬರೂ ಅನುಭವಿ ಬ್ಯಾಟ್ಸ್‌ಮನ್‌ಗಳೇ ಆಗಿದ್ದು, ಜತೆಗೆ ಆರು ವಿಕೆಟ್‌ಗಳು ಕೈಯಲ್ಲಿರುವುದರಿಂದ ಭಾರತದ ಸಂಕಷ್ಟವನ್ನು ಇನ್ನಷ್ಟು ಹೆಚ್ಚುವ ಸುಳಿವನ್ನಂತೂ ಕಾಂಗರೂ ಪಡೆ ನೀಡಿಯಾಗಿದೆ. ಪಿಚ್ ಮತ್ತೆ ಮತ್ತೆ ತಿರುವು ಪಡೆದುಕೊಳ್ಳುತ್ತಿದ್ದು, ಸ್ಪಿನ್ನರ್‌ಗಳ ಸದ್ದು ದೊಡ್ಡದಾಗಿಯೇ ಕೇಳಿಬರುತ್ತಿರುವುದರ ಜತೆಗೆ ವೇಗಿಗಳೂ ಮಿಂಚುತ್ತಿರುವುದು ಎಂಸಿಎ ಪಿಚ್‌'ನ ವೈಶಿಷ್ಟ್ಯತೆ ಎನಿಸಿದೆ.

ನಾಟಕೀಯ ಪತನ!

256 ರನ್‌ಗಳಿಗೆ 9 ವಿಕೆಟ್‌'ಗಳೊಂದಿಗೆ ದಿನದಾಟ ಆರಂಭಿಸಿದ ಆಸೀಸ್ ಮೊದಲ ಓವರ್‌'ನಲ್ಲೇ ತನ್ನ ಇನಿಂಗ್ಸ್‌ಗೆ ಇತಿಶ್ರೀ ಹಾಡಿತು. ಅಶ್ವಿನ್ ಮಾಡಿದ 95ನೇ ಓವರ್‌'ನ ಎರಡನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಮಿಚೆಲ್ ಸ್ಟಾರ್ಕ್, ಐದನೇ ಎಸೆತದಲ್ಲಿ ಜಡೇಜಾಗೆ ಕ್ಯಾಚಿತ್ತು ಹೋರಾಟ ಮುಗಿಸಿದರು. ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತ, ಮೊದಮೊದಲು ಎಚ್ಚರಿಕೆಯ ಹೆಜ್ಜೆ ಇಟ್ಟಂತೆ ಭಾಸವಾದರೂ, ಆರಂಭಿಕ ಮುರವಿ ವಿಜಯ್ (10) ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ವೇಗಿ ಜೋಶ್ ಹ್ಯಾಜ್ಲೆವುಡ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್‌ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ತುಳಿದರು. 26 ರನ್‌'ಗೆ ಮೊದಲ ವಿಕೆಟ್ ಕಳೆದುಕೊಂಡ ತಂಡಕ್ಕೆ ಮತ್ತೆರಡು ಪ್ರಬಲ ಪ್ರಹಾರ ಬಿದ್ದದ್ದು ಟೀಂ ಇಂಡಿಯಾದ ಮಹಾನ್ ಪತನಕ್ಕೆ ಮುನ್ನುಡಿ ಬರೆಯಿತು. 15ನೇ ಓವರ್‌'ನಲ್ಲಿ ದಾಳಿಗಿಳಿದ ಮಿಚೆಲ್ ಸ್ಟಾರ್ಕ್, ಮುರಳಿ ಬಳಿಕ ಆಡಲಿಳಿದ ಚೇತೇಶ್ವರ ಪೂಜಾರ (6) ಹಾಗೂ ಆನಂತರ ಬಂದ ವಿರಾಟ್ ಕೊಹ್ಲಿ (0) ವಿಕೆಟ್ ಎಗರಿಸಿದ್ದು ಕಾಂಗರೂ ಪಾಳೆಯದಲ್ಲಿ ಹರ್ಷದ ಬುಗ್ಗೆ ಎಬ್ಬಿಸಿತು. ಈ ಓವರ್‌ನ ಎರಡನೇ ಎಸೆತದಲ್ಲಿ ಪೂಜಾರ, ಮ್ಯಾಥ್ಯೂ ವೇಡ್‌ಗೆ ಕ್ಯಾಚಿತ್ತರೆ, 4ನೇ ಎಸೆತದಲ್ಲಿ ಕೊಹ್ಲಿ ಸ್ಲಿಪ್‌ನಲ್ಲಿದ್ದ ಹ್ಯಾಂಡ್‌ಸ್ಕಂಬ್‌ಗೆ ಕ್ಯಾಚಿತ್ತು ಹೊರನಡೆದರು. 2014ರ ಆಗಸ್ಟ್‌ನಿಂದಾಚೆಗಿನ ಒಟ್ಟಾರೆ 45 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಹೀಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಮೊದಲ ಬಾರಿ!

ರಾಹುಲ್ ಏಕಾಂಗಿ ಹೋರಾಟ

ಎರಡು ಮಹತ್ವಪೂರ್ಣ ವಿಕೆಟ್‌'ಗಳೊಂದಿಗೆ ಭಾರತದ ಇನ್ನಿಂಗ್ಸ್‌ಗೆ ಬಲವಾದ ಪೆಟ್ಟು ಬಿದ್ದಿತಾದರೂ, ಆನಂತರ ಚೇತರಿಸಿಕೊಳ್ಳುವ ಅವಕಾಶವಿತ್ತು. ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೆ 70 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತ, ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ್ದರೆ ಪುಟಿದೆದ್ದು ನಿಲ್ಲುವ ಅವಕಾಶವಂತೂ ಇರುತ್ತಿತ್ತು. ಆದರೆ, ಕೇವಲ 38 ನಿಮಿಷಗಳ ಅಂತರದಲ್ಲಿ ಉಳಿದ ಏಳು ವಿಕೆಟ್‌'ಗಳು ಒಂದರ ಹಿಂದೊಂದರಂತೆ ಬಿದ್ದದ್ದು ಸ್ವತಃ ಪ್ರವಾಸಿಗರನ್ನೂ ಅಚ್ಚರಿಗೊಳಿಸಿತು. ತಂಡದ ಪರ ಏಕಾಂಗಿ ಹೋರಾಟ ವ್ಯಕ್ತವಾದದ್ದು ಕನ್ನಡಿಗ ಕೆ.ಎಲ್. ರಾಹುಲ್ ಅವರಿಂದ ಮಾತ್ರ.

ಸ್ಕೋರ್ ವಿವರ

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ :260/10

ಭಾರತ ಮೊದಲ ಇನ್ನಿಂಗ್ಸ್ : 105/10

ಕೆ.ಎಲ್ ರಾಹುಲ್ 64

ಸ್ಟೀವನ್ ಒ’ಕೀಫೆ :35/6

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ : 143/4

ಸ್ಟೀವನ್ ಸ್ಮಿತ್ : 59*

ಆರ್. ಅಶ್ವಿನ್ : 68/3