ನವದೆಹಲಿ[ಮೇ.13]: ಶತಕ ಸಿಡಿಸಿ ಸಂಭ್ರಮಿಸಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್’ಮನ್ ಉಸ್ಮಾನ್ ಖವಾಜ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ನಿಟ್ಟುಸಿರು ಬಿಟ್ಟಿದೆ. ಇದರ ಬೆನ್ನಲ್ಲೇ ಮ್ಯಾಕ್ಸ್’ವೆಲ್ ಹಾಗೂ ಹ್ಯಾಂಡ್ಸ್’ಕಂಬ್ ಕೂಡಾ ಪೆವಿಲಿಯನ್ ಸೇರಿದ್ದಾರೆ. 37 ಓವರ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 188 ರನ್ ಬಾರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿದೆ. ಮೊದಲ ವಿಕೆಟ್’ಗೆ ಆ್ಯರೋನ್ ಫಿಂಚ್-ಉಸ್ಮಾನ್ ಖವಾಜ 76 ರನ್’ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿತು. ಉತ್ತಮ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ನಾಯಕ ಫಿಂಚ್ ಅವರನ್ನು ಕ್ಲೀನ್ ಬೌಲ್ಟ್ ಮಾಡುವಲ್ಲಿ ರವೀಂದ್ರ ಜಡೇಜಾ ಸಫಲರಾದರು. ಒಟ್ಟು 43 ಎಸೆತಗಳನ್ನು ಎದುರಿಸಿದ ಫಿಂಚ್ 4 ಬೌಂಡರಿ ಸಹಿತ 27 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಆ ಬಳಿಕ ಹ್ಯಾಂಡ್ಸ್’ಕಂಬ್ ಕೂಡಿಕೊಂಡ ಖವಾಜ ತಂಡವನ್ನು 150ರ ಗಡಿ ದಾಟಿಸಿದರು. ಟೂರ್ನಿಯುದ್ಧಕ್ಕೂ ಸ್ಥಿರ ಪ್ರದರ್ಶನ ತೋರುತ್ತಾ ಸಾಗುತ್ತಿರುವ ಖವಾಜ ಮತ್ತೊಂದು ಶತಕ ಸಿಡಿಸಿದರು. 106 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ನೂರು ರನ್ ಬಾರಿಸಿ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಮ್ಯಾಕ್ಸ್’ವೆಲ್[01] ಬಲಿ ಪಡೆಯುವಲ್ಲಿ ಜಡೇಜಾ ಸಫಲರಾದರು. ಇನ್ನು ಅರ್ಧಶತಕ ಸಿಡಿಸಿ ಮುನ್ನುಗ್ಗುತಿದ್ದ ಹ್ಯಾಂಡ್ಸ್’ಕಂಬ್ 52 ರನ್ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ.

5 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಜಯಿಸಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡವು ಸರಣಿ ಗೆಲ್ಲಲಿದೆ.