1999ರಿಂದ ಇಲ್ಲೀವರೆಗೆ ಪಾಕಿಸ್ತಾನ ಕೈಗೊಂಡ ನಾಲ್ಕು ಪ್ರವಾಸಗಳಲ್ಲಿಯೂ ಆಸ್ಟ್ರೇಲಿಯಾ ಕ್ಲೀನ್‌ಸ್ವೀಪ್ ಸಾಧನೆ ಮೆರೆದಂತಾಗಿದೆ.

ಸಿಡ್ನಿ(ಜ.07): ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿನ ಸೋಲಿನಿಂದ ಕಂಗೆಟ್ಟಿದ್ದ ಪ್ರವಾಸಿ ಪಾಕಿಸ್ತಾನ, ಕೊನೆಯ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡು ಕ್ಲಿನ್‌'ಸ್ವೀಪ್ ಮುಖಭಂಗದಿಂದ ಪಾರಾಗಲು ನಡೆಸಿದ ಪ್ರಯತ್ನವೆಲ್ಲಾ ವ್ಯರ್ಥವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್‌ನಲ್ಲಿ 220 ರನ್'ಗಳ ಭರ್ಜರಿ ಜಯ ದಾಖಲಿಸಿದೆ.

ಇಲ್ಲಿನ ಎಸ್‌'ಸಿಜೆ ಮೈದಾನದಲ್ಲಿ ಮುಕ್ತಾಯ ಕಂಡ ಪಂದ್ಯದಲ್ಲಿ ವೇಗಿ ಜೋಶ್ ಹ್ಯಾಜಲ್‌'ವುಡ್‌ ಮತ್ತು ಸ್ಪಿನ್ನರ್‌'ಗಳ ಸಂಘಟಿತ ಬೌಲಿಂಗ್ ಪ್ರದರ್ಶನದಿಂದಾಗಿ ಕಂಗೆಟ್ಟು ಹೋದ ಪಾಕಿಸ್ತಾನ, ಗೆಲ್ಲಲು ತನ್ನ ಮುಂದಿದ್ದ 465 ರನ್‌'ಗೆ ಪ್ರತಿಯಾಗಿ ಕೇವಲ 244 ರನ್‌'ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಇದರೊಂದಿಗೆ 1999ರಿಂದ ಇಲ್ಲೀವರೆಗೆ ಪಾಕಿಸ್ತಾನ ಕೈಗೊಂಡ ನಾಲ್ಕು ಪ್ರವಾಸಗಳಲ್ಲಿಯೂ ಆಸ್ಟ್ರೇಲಿಯಾ ಕ್ಲೀನ್‌ಸ್ವೀಪ್ ಸಾಧನೆ ಮೆರೆದಂತಾಗಿದೆ.

ಸರ್ಫರಾಜ್ ಅರ್ಧಶತಕ

55 ರನ್‌ಗಳಿಗೆ 1 ವಿಕೆಟ್‌ನೊಂದಿಗೆ ಕೊನೆಯ ದಿನದಾಟ ಆರಂಭಿಸಿದ ಪಾಕಿಸ್ತಾನ, ದಿಟ್ಟ ಹೋರಾಟ ನಡೆಸುವಲ್ಲಿ ವಿಫಲವಾಯಿತು. ಕೇವಲ ನಾಲ್ಕು ರನ್ ಗಳಿಸುವಷ್ಟರಲ್ಲೇ ಆರಂಭಿಕ ಅಜರ್ ಅಲಿ ವಿಕೆಟ್ ಒಪ್ಪಿಸಿದರು. 11 ರನ್ ಗಳಿಸಿ ಕ್ರೀಸ್‌'ನಲ್ಲಿದ್ದ ಅವರು ಯಾವುದೇ ರನ್ ಗಳಿಸದೆ ಪವಿಲಿಯನ್ ಸೇರಿದರೆ, 3 ರನ್ ಮಾಡಿದ್ದ ಯಾಸಿರ್ ಷಾ 10 ರನ್ ಪೇರಿಸಿ ಒಕೀಫಿ ಬೌಲಿಂಗ್‌'ನಲ್ಲಿ ಬದಲಿ ಆಟಗಾರ ಜೇಮ್ಸ್ ಬರ್ಡ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ದಾಖಲಿಸಿದ್ದ ಯೂನಿಸ್ ಖಾನ್ (13), ಸ್ಪಿನ್ನರ್ ನಾಥನ್ ಲಿಯೋನ್ ಬೌಲಿಂಗ್‌'ನಲ್ಲಿ ಮಿಡ್ ಆನ್‌'ನಲ್ಲಿದ್ದ ಹ್ಯಾಜಲ್‌'ವುಡ್‌'ಗೆ ಕ್ಯಾಚಿತ್ತು ಕೇವಲ 23 ರನ್‌'ಗಳಿಂದ 10 ಸಹಸ್ರ ರನ್‌ ಗಡಿ ದಾಟುವ ಅವಕಾಶದಿಂದ ವಂಚಿತವಾದರು. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಮಿಸ್ಬಾ ಉಲ್ ಹಕ್ (38), ಅಸದ್ ಶಫೀಕ್ (30) ಉತ್ತಮ ಜತೆಯಾಟ ನೀಡಿದರೆ, ಇತ್ತ, ಸರ್ಫರಾಜ್ ಅಹಮದ್ (ಅಜೇಯ 72) ಅರ್ಧಶತಕದ ಪ್ರತಿರೋಧ ತೋರಿದರು.

ಆಸೀಸ್ ಪರ ಜೋಶ್ ಹ್ಯಾಜಲ್‌'ವುಡ್‌ 29ಕ್ಕೆ 3, ಒಕೀಫಿ 53ಕ್ಕೆ 3 ವಿಕೆಟ್ ಗಳಿಸಿದರೆ, ನಾಥನ್ ಲಿಯೋನ್ 100ಕ್ಕೆ 2 ಹಾಗೂ ಮಿಚೆಲ್ ಸ್ಟಾರ್ಕ್ 52ಕ್ಕೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 538/8 (ಡಿಕ್ಲೇರ್)

ಪಾಕಿಸ್ತಾನ ಮೊದಲ ಇನ್ನಿಂಗ್ಸ್: 315/10

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್: 241/2 (ಡಿಕ್ಲೇರ್)

ಪಾಕಿಸ್ತಾನ ಎರಡನೇ ಇನ್ನಿಂಗ್ಸ್: 244/10

ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್

ಸರಣಿಶ್ರೇಷ್ಠ: ಸ್ಟೀವನ್ ಸ್ಮಿತ್