ಮ್ಯಾಡ್ರಿಡ್(ಅ.03): ಇಲ್ಲಿ ನಡೆಯುತ್ತಿರುವ ಲಾ ಲಿಗಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಟ್ಲೆಟಿಕೋ ಮ್ಯಾಡ್ರಿಡ್ ತಂಡ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದೆ. ಸೋಮವಾರ ನಡೆದ ಮತ್ತೊಂದು ಪಂದ್ಯದಲ್ಲಿ ಸೆಲ್ಟಾವಿಗೋ ತಂಡ, ಬಾರ್ಸಿಲೋನಾ ತಂಡದ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿದರೆ, ಮತ್ತೊಂದು ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡವು ಐಬರ್ ತಂಡದ ವಿರುದ್ಧ 1-1ರ ಸಮಬಲ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
ಈ ಪಂದ್ಯಗಳ ಫಲಿತಾಂಶಗಳಿಂದಾಗಿ ಅಟ್ಲೆಟಿಕೋ ತಂಡ ಇಲ್ಲೀವರೆಗಿನ ಏಳು ಪಂದ್ಯಗಳಲ್ಲಿ 4ರಲ್ಲಿ ಗೆಲುವು, 3 ಡ್ರಾದಿಂದಾಗಿ 15 ಅಂಕ ಗಳಿಸಿ ಅಂಕಪಟ್ಟಿಯ ಮೊದಲ ಸ್ಥಾನಕ್ಕೇರಿತು.
ಮೆಸ್ಸಿ ಗೈರಿನಲ್ಲಿ ಸೋಲು: ಇನ್ನು ಗಾಯಾಳು ಮೆಸ್ಸಿ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಬಾರ್ಸಿಲೋನಾ ತಂಡ, ಸೆಲ್ಟಾವಿರುದ್ಧ 3-4 ಗೋಲುಗಳ ಅಂತರದಲ್ಲಿ ಸೋಲು ಕಂಡಿತು. ಪಂದ್ಯದ ಆರಂಭದಿಂದಲೂ ಬಾರ್ಕಾ ಮೇಲೆ ಹಿಡಿತ ಸಾಧಿಸಿದ್ದ ಸೆಲ್ಟಾ, ಸಿಸ್ಟೋ (22ನೇ ನಿ.), ಲಾಗೋ ಆಸ್ಪಾಸ್ (31), ಪಿ. ಹೆಮಾಂಡಿಸ್ 77ನೇ ನಿಮಿಷಗಳಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರೆ, ಮತ್ತೊಂದು ಗೋಲು ಬಾರ್ಸಿಲೋನಾ ತಂಡದ ಜೆರೆಮಿ ಮಥಿಯೂ ಅವರು ದಾಖಲಿಸಿದ ಸ್ವ-ಗೋಲು ಉಡುಗೊರೆಯಾಗಿ ಬಂದು ಗೆಲುವಿಗೆ ಸಹಕಾರಿಯೆನಿಸಿತು. ಬಾರ್ಸಿಲೋನಾ ಪರವಾಗಿ, ಪಿಕ್ಯು (58 ಹಾಗೂ 87 ನೇ ನಿ.), ನೇಮಾರ್ (64ನೇ ನಿ.) ಗೋಲು ದಾಖಲಿಸಿದರು.
