ಜಾಫರ್ ಭರ್ಜರಿ ದ್ವಿಶತಕ; ವಯಸ್ಸು 40, ಆದರೆ ದಾಖಲೆಗಳು...

First Published 16, Mar 2018, 12:38 PM IST
At 40 Wasim Jaffer still raising the bar
Highlights

2ನೇ ದಿನದಂತ್ಯಕ್ಕೆ ರಣಜಿ ಚಾಂಪಿಯನ್ ವಿದರ್ಭ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 598ರನ್ ಗಳಿಸಿದೆ. 285 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಜಾಫರ್, 3ನೇ ದಿನದಾಟದಲ್ಲಿ ತ್ರಿಶತಕ ಸಿಡಿಸುವ ಉತ್ಸಾಹದಲ್ಲಿದ್ದಾರೆ. ಆದರೆ ಮಳೆ ಅಡ್ಡಿಯಾಗಿದೆ.

ನಾಗ್ಪುರ (ಮಾ.16) ವಯಸ್ಸು ಕೇವಲ ಸಂಖ್ಯೆಯಷ್ಟೇ ಎನ್ನುವುದನ್ನು ಭಾರತೀಯ ದೇಸಿ ಕ್ರಿಕೆಟ್‌'ನ ರನ್ ಮಷಿನ್ ವಾಸೀಂ ಜಾಫರ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಶೇಷ ಭಾರತದ ಯುವ ಬೌಲಿಂಗ್ ಪಡೆಯನ್ನು ಚೆಂಡಾಡಿದ 40 ವರ್ಷದ ಜಾಫರ್, ಇರಾನಿ ಟ್ರೋಫಿಯಲ್ಲಿ ವಿದರ್ಭ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಕಾರಣರಾದರು. 2ನೇ ದಿನದಂತ್ಯಕ್ಕೆ ರಣಜಿ ಚಾಂಪಿಯನ್ ವಿದರ್ಭ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 598ರನ್ ಗಳಿಸಿದೆ. 285 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಜಾಫರ್, 3ನೇ ದಿನದಾಟದಲ್ಲಿ ತ್ರಿಶತಕ ಸಿಡಿಸುವ ಉತ್ಸಾಹದಲ್ಲಿದ್ದಾರೆ. ಆದರೆ ಮಳೆ ಅಡ್ಡಿಯಾಗಿದೆ. 2ನೇ ದಿನ ಜಾಫರ್ ಕೆಲ ಪ್ರಮುಖ ದಾಖಲೆಗಳನ್ನೂ ನಿರ್ಮಿಸಿದ್ದಾರೆ.

18,000 ರನ್ ಸರದಾರ

285 ರನ್‌'ಗಳ ತಮ್ಮ ಇನ್ನಿಂಗ್ಸ್‌ನೊಂದಿಗೆ ಜಾಫರ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18,000ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 6ನೇ ಆಟಗಾರ ಎನ್ನುವ ಹೆಗ್ಗೆಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಗವಾಸ್ಕರ್ (25,834),ಸಚಿನ್ (25,396), ದ್ರಾವಿಡ್ (23,794), ಲಕ್ಷ್ಮಣ್ (19,730), ವಿಜಯ್ ಹಜಾರೆ (18,740) ಈ ಸಾಧನೆ ಮಾಡಿದ್ದರು.

5ನೇ ಅತಿ ಹಿರಿಯ ಆಟಗಾರ

ಇದೇ ವೇಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತ 5ನೇ ಅತಿಹಿರಿಯ ಆಟಗಾರ ಎನ್ನುವ ದಾಖಲೆಯನ್ನೂ ಜಾಫರ್ (40 ವರ್ಷ) ಬರೆದರು. ಈ ಮೊದಲು ಸಿ.ಕೆ.ನಾಯ್ಡು (50ವರ್ಷ), ಡಿ.ಬಿ.ದೇವಧರ್ (48 ವರ್ಷ), ವಿಜಯ್ ಹಜಾರೆ (43 ವರ್ಷ), ವಿನೂ ಮಂಕಡ್ (40 ವರ್ಷ) ವಯಸ್ಸಿದ್ದಾಗ ಪ್ರ.ದರ್ಜೆಯಲ್ಲಿ ದ್ವಿಶತಕ ಬಾರಿಸಿದ್ದರು.

ಇರಾನಿ ಟ್ರೋಫಿಯಲ್ಲಿ ವೈಯಕ್ತಿಕ ಗರಿಷ್ಠ ರನ್

285 ರನ್ ಗಳಿಸಿರುವ ಜಾಫರ್, ಇರಾನಿ ಟ್ರೋಫಿಯಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆ ಬರೆದಿದ್ದಾರೆ. ಈ ಮೊದಲು 2012-13ರ ಋತುವಿನಲ್ಲಿ ಮುರಳಿ ವಿಜಯ್ ಗಳಿಸಿದ್ದ 266 ರನ್, ಗರಿಷ್ಠ ವೈಯಕ್ತಿಯ ಮೊತ್ತವಾಗಿತ್ತು.

loader