ಏಷ್ಯನ್ ಕಬಡ್ಡಿ ಟೂರ್ನಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಪ್ರೊ ಕಬಡ್ಡಿ ಹೀರೋಗೆ ಸ್ಥಾನ
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಭಾರತ ತಂಡ ಪ್ರಕಟ
ತಂಡದಲ್ಲಿ ನವೀನ್ ಕುಮಾರ್ ಹಾಗೂ ಪವನ್ ಶೆರಾವತ್‌ಗೆ ಸ್ಥಾನ
ಕೊರಿಯಾದ ಬೂಸಾನ್‌ನಲ್ಲಿ ಜೂನ್ 27ರಿಂದ 30ರ ವರೆಗೂ ನಡೆಯಲಿರುವ ಟೂರ್ನಿ
ನವದೆಹಲಿ(ಮೇ.25): ಕೊರಿಯಾದ ಬೂಸಾನ್‌ನಲ್ಲಿ ಜೂನ್ 27ರಿಂದ 30ರ ವರೆಗೂ ನಡೆಯಲಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಬುಧವಾರ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್(ಎಕೆಎಫ್‌ಐ) 12 ಸದಸ್ಯರ ತಂಡವನ್ನು ಪ್ರಕಟಿಸಿತು. ಪಾಟ್ನಾದಲ್ಲಿ ನಡೆದ ತರಬೇತಿ ಶಿಬಿರದ ಬಳಿಕ ತಂಡದ ಆಯ್ಕೆ ನಡೆದಿದೆ. ಸ್ಟಾರ್ ರೈಡರ್‌ಗಳಾದ ನವೀನ್ ಕುಮಾರ್ ಹಾಗೂ ಪವನ್ ಶೆರಾವತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಬರೋಬ್ಬರಿ 6 ವರ್ಷಗಳ ಬಳಿಕ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಆಯೋಜನೆಗೊಂಡಿದ್ದು, ಭಾರತ ತಂಡವು ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವನ್ನು ಹೊಂದಿದೆ. ಆದರೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿಯೇ ಅತಿಹೆಚ್ಚು ರೈಡ್ ಪಾಯಿಂಟ್ ಗಳಿಸಿದ ಅನುಭವಿ ಆಟಗಾರ ಪ್ರದೀಪ್ ನರ್ವಾಲ್, ಈ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಅನುಭವಿ ಆಲ್ರೌಂಡರ್ ದೀಪಕ್ ಹೂಡಾ ಕೂಡಾ ಭಾರತ ತಂಡದಿಂದ ಹೊರಬಿದ್ದಿದ್ದಾರೆ.
ಇದಷ್ಟೇ ಅಲ್ಲದೇ ಸುರೇಂದರ್ ಗಿಲ್, ಸುರೇಂದರ್ ನಾಡಾ, ಗಿರೀಶ್ ಮಾರುತಿ ಎರ್ನಾಕ್, ಸಿದ್ದಾರ್ಥ್ ದೇಸಾಯಿ, ಮಣೀಂದರ್ ಸಿಂಗ್, ರವೀಂದರ್ ಪೆಹಲ್ ಹಾಗೂ ಮಹೇಂದರ್ ಸಿಂಗ್ ಕೂಡಾ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಆದರೆ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅಮೋಘ ರೈಡಿಂಗ್ ಪ್ರದರ್ಶನ ತೋರಿದ್ದ ಅರ್ಜುನ್ ದೇಸ್ವಾಲ್, ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಡೆಲ್ಲಿ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಹಾಗೂ ಪವನ್ ಶೆರಾವತ್ ಜತೆಗೂಡಿದ್ದು, ತಂಡದ ಬಲ ಹೆಚ್ಚುವಂತೆ ಮಾಡಿದೆ.
ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಇಂದು ಪ್ರಧಾನಿ ಮೋದಿ ಚಾಲನೆ
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತ ತಂಡ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಇದುವರೆಗೂ 8 ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ನಡೆದಿದ್ದು, ಭಾರತ 7 ಬಾರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. 2017ರಲ್ಲಿ ಕೊನೆಯ ಬಾರಿಗೆ ಇರಾನ್‌ನ ಗೋರ್ಗೊನ್‌ನಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಜರುಗಿತ್ತು, ಆಗ ಬದ್ದ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ತಂಡ: ಪವನ್ ಶೆರಾವತ್, ಅರ್ಜುನ್ ದೇಶ್ವಾಲ್, ನವೀನ್ ಕುಮಾರ್, ಸಚಿನ್, ಅಸ್ಲಾಂ ಇನಾಂದಾರ್, ಮೋಹಿತ್ ಗೋಯತ್, ಸುನಿಲ್ ಕುಮಾರ್, ಪರ್ವೇಶ್ ಬೈನ್ಸ್‌ವಾಲ್, ನಿತಿನ್ ರಾವಲ್, ನಿತೀಶ್ ಕುಮಾರ್, ಸುರ್ಜೀತ್ ಸಿಂಗ್, ವಿಶಾಲ್ ಭಾರದ್ವಾಜ್.
ಮೀಸಲು ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ.
ಪ್ರೊ ಕಬಡ್ಡಿ: ಡೆಲ್ಲಿ ತಂಡಕ್ಕೆ ಅಜಯ್ ಠಾಕೂರ್ ಕೋಚ್
ನವದೆಹಲಿ: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಇನ್ನೇನು ಕೆಲವೇ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡದ ಸಹಾಯಕ ಕೋಚ್ ಆಗಿ ಭಾರತದ ಮಾಜಿ ನಾಯಕ, ತಾರಾ ಕಬಡ್ಡಿ ಪಟು ಅಜಯ್ ಠಾಕೂರ್ ನೇಮಕಗೊಂಡಿದ್ದಾರೆ. ಬೆಂಗಳೂರು, ಪುಣೆ, ತಮಿಳ್ ತಲೈವಾಸ್, ಡೆಲ್ಲಿ ತಂಡಗಳ ಪರ ಆಡಿರುವ ಅಜಯ್, 2016ರಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.