ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರವು ನಗದು ಬಹುಮಾನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಜೊತೆಗೆ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಶೇ.2ರಷ್ಟು ಮೀಸಲಾತಿಯನ್ನು ಘೋಷಿಸಿ ಸನ್ಮಾನಿಸಲಾಗಿದೆ.

Asian Games Medal Winners Get Big Reward From Karnataka ಬೆಂಗಳೂರು: ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಏಷ್ಯಾಡ್‌ ಪದಕ ವಿಜೇತ ರಾಜ್ಯದ 8 ಕ್ರೀಡಾಪಟುಗಳ ಪೈಕಿ 7 ಮಂದಿಯನ್ನು ಸನ್ಮಾನಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಒಟ್ಟು ₹8 ಕೋಟಿ ನಗದು ಬಹುಮಾನ ಘೋಷಿಸಿದರು. ಗಾಲ್ಫರ್‌ ಪ್ರಣವಿ ಅರಸ್‌ ಸನ್ಮಾನ ಕಾರ್ಯಕ್ರಮಕ್ಕೆ ಗೈರಾದರು.

ಈ ಹಿಂದೆ ಏಷ್ಯಾಡ್‌ ಚಿನ್ನ ವಿಜೇತರಿಗೆ ₹35 ಲಕ್ಷ, ಬೆಳ್ಳಿ ವಿಜೇತರಿಗೆ ₹25 ಹಾಗೂ ಕಂಚು ವಿಜೇತರಿಗೆ ₹15 ಲಕ್ಷ ನೀಡಲಾಗುತ್ತಿತ್ತು. ಇದೀಗ ಅದನ್ನು ಕ್ರಮವಾಗಿ ₹1 ಕೋಟಿ, ₹75 ಲಕ್ಷ ₹50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಜೊತೆಗೆ, ಏಷ್ಯಾಡ್‌ಗೆ ಆಯ್ಕೆಯಾಗಿದ್ದ 20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಪ್ರೋತ್ಸಾಹ ಧನ ಮಂಜೂರು ಮಾಡಲಾಗಿದೆ.

ಅಲ್ಲದೆ, ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗ್ರೂಪ್‌-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಆಯ್ಕೆ ಸಮಿತಿ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ನೇರ ನೇಮಕಾತಿಗಳಲ್ಲಿ ಶೇ.2 ರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ. ಗ್ರೂಪ್‌-ಎ, ಬಿ, ಸಿ ಮತ್ತು ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಡಾ. ಕೆ.ಗೋವಿಂದರಾಜು, ವಾರ್ತಾ ಇಲಾಖೆ ಆಯಕ್ತ ಅನುಚೇತ್‌ ಮತ್ತಿತರರು ಉಪಸ್ಥಿತರಿದ್ದರು.

--

ಯಾರ್ಯಾರಿಗೆ ಎಷ್ಟು ಮೊತ್ತ ?

ಕ್ರೀಡಾಪಟು ಕ್ರೀಡೆ ಗೆದ್ದ ಪದಕ ಸಿಕ್ಕ ನಗದು

ಶ್ರೇಯಾಂಕಾ ಕ್ರಿಕೆಟ್‌ ಚಿನ್ನ ₹1 ಕೋಟಿ

ಪೂವಮ್ಮ ಅಥ್ಲೆಟಿಕ್ಸ್‌ ಚಿನ್ನ, ಬೆಳ್ಳಿ ₹1.75 ಕೋಟಿ

ಪ್ರಣವಿ ಅರಸ್ ಗಾಲ್ಫ್‌ ಚಿನ್ನ, ಬೆಳ್ಳಿ ₹1.75 ಕೋಟಿ

ಮೋಹಿತ್‌ ಹಾಕಿ ಚಿನ್ನ ₹1 ಕೋಟಿ

ತಿಲೋತ್ತಮಾ ಶೂಟಿಂಗ್‌ ಬೆಳ್ಳಿ ₹75 ಲಕ್ಷ

ಅದಿತಿ ಅಶೋಕ್ ಗಾಲ್ಫ್‌ ಬೆಳ್ಳಿ ₹75 ಲಕ್ಷ

ಆಯುಷ್ ಶೆಟ್ಟಿ ಬ್ಯಾಡ್ಮಿಂಟನ್‌ ಕಂಚು ₹50 ಲಕ್ಷ

ಸ್ನೇಹಾ ಅಥ್ಲೆಟಿಕ್ಸ್‌ ಕಂಚು ₹50 ಲಕ್ಷ

--

ಭಾವನಾತ್ಮಕವಾಗಿ ಮಾತನಾಡಿದ್ದೆ

ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಪಡೆದ ಬಳಿಕ ತಮಗೆ ಕರೆಗಳು ಬಾರದಿರುವುದಕ್ಕೆ ಭಾವನಾತ್ಮಕವಾಗಿ ಮಾತನಾಡಿದ್ದೆ. ಆದರೆ ನನ್ನನ್ನು ಸಂಪರ್ಕಿಸಲು ಮುಖ್ಯಮಂತ್ರಿ ಸೇರಿ ಹಲವು ನಾಯಕರು ಪ್ರಯತ್ನಿಸಿದ್ದರು ಎಂಬುದು ಬಳಿಕ ತಿಳಿಯಿತು. ಅಂತಾರಾಷ್ಟ್ರೀಯ ರೋಮಿಂಗ್‌ ಸೌಲಭ್ಯ ಇಲ್ಲದಿರುವುದರಿಂದ ಹೀಗಾಗಿದೆ. ಆದರೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಸಿಎಂ, ಡಿಸಿಎಂ, ಕೇಂದ್ರ ಸಚಿವರು, ಸಂಸದರು, ಶಾಸಕರು ಸೇರಿ ಬಹಳಷ್ಟು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ರೋಮಾಂಚನ ಉಂಟಾದಂತೆ ಈಗಲೂ ಆಯಿತು.

- ಎಂ.ಆರ್‌.ಪೂವಮ್ಮ, ಅಥ್ಲೀಟ್‌.