18ನೇ ಏಷ್ಯನ್ ಗೇಮ್ಸ್ ಟೂರ್ನಿಗೆ ಕೇವಲ ಇನ್ನೆರಡೇ ದಿನ ಬಾಕಿ ಉಳಿದಿದ್ದು, ಈ ಬಾರಿ ಇಂಡೋನೇಷ್ಯಾದ ಜಕಾರ್ತ್’ನಲ್ಲಿ ಟೂರ್ನಿ ಆಯೋಜನೆಗೊಂಡಿದೆ. ದಶಕಗಳ ಕಾಲ ಜಪಾನ್ ಏಷ್ಯನ್
ಗೇಮ್ಸ್ ಸಾಮ್ರಾಟನಾಗಿ ಮೆರೆದಿತ್ತು. ಆ ಬಳಿಕ 1982ರ ನಂತರ ಜಪಾನ್ ಹಿಂದಿಕ್ಕಿ ಚೀನಾ ಪ್ರಾಬಲ್ಯ ಆರಂಭವಾಯಿತು. ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್ ಗೇಮ್ಸ್ ಕೂಟದ ಒಂದು ಮೆಲುಕು ನಿಮ್ಮ ಮುಂದೆ...

1982ರಲ್ಲಿ ಭಾರತದಲ್ಲಿ ಕ್ರೀಡಾಕೂಟ

1951ರಲ್ಲಿ ಚೊಚ್ಚಲ ಏಷ್ಯನ್ ಗೇಮ್ಸ್‌ಗೆ ಆತಿಥ್ಯ ವಹಿಸಿದ್ದ ನವದೆಹಲಿ, 1982ರಲ್ಲಿ ಮತ್ತೊಮ್ಮೆ ಕ್ರೀಡಾಕೂಟಕ್ಕೆ ವೇದಿಕೆ ಒದಗಿಸಿತು. 9ನೇ ಆವೃತ್ತಿಯಲ್ಲಿ 33 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇಲ್ಲಿಂದ ಚೀನಾ ಪ್ರಾಬಲ್ಯ ಆರಂಭಗೊಂಡಿತು. 153 ಪದಕ ಗೆದ್ದ ಚೀನಾ ಅಗ್ರಸ್ಥಾನ ಪಡೆಯಿತು. ಜಪಾನ್ ಸಹ 153 ಪದಕ ಜಯಿಸಿತು. ಆದರೆ ಚೀನಾ ಹೆಚ್ಚು ಚಿನ್ನ ಗೆದ್ದಿದ್ದರಿಂದ ಅಗ್ರಸ್ಥಾನ ಗಳಿಸಿತು. 57 ಪದಕಗಳೊಂದಿಗೆ ಭಾರತ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 

1986 -  ಸೋಲ್‌
10ನೇ ಏಷ್ಯನ್ ಗೇಮ್ಸ್ 1986ರಲ್ಲಿ ದ. ಕೊರಿಯಾದ ಸೋಲ್‌ನಲ್ಲಿ ನಡೆಯಿತು. 1988ರ ಒಲಿಂಪಿಕ್ಸ್‌ಗೆ ಪರೀಕ್ಷಾರ್ಥವಾಗಿ ಈ ಕ್ರೀಡಾಕೂಟ ನಡೆಯಿತು. 27 ರಾಷ್ಟ್ರಗಳು ಕ್ರೀಡಾಕೂಟದಲ್ಲಿ
ಪಾಲ್ಗೊಂಡಿದ್ದವು. ಚೀನಾ 94 ಚಿನ್ನದೊಂದಿಗೆ 222 ಪದಕ ಗೆದ್ದು ಅಗ್ರಸ್ಥಾನಿಯಾಯಿತು. ದ.ಕೊರಿಯಾ 93 ಚಿನ್ನದೊಂದಿಗೆ ಒಟ್ಟು 224 ಪದಕ ಗೆದ್ದರೂ, 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 37
ಪದಕಗಳೊಂದಿಗೆ ಭಾರತ 5ನೇ ಸ್ಥಾನ ಪಡೆಯಿತು.

1990 - ಬೀಜಿಂಗ್​​​​​​​
ಚೀನಾದ ಬೀಜಿಂಗ್ 1990ರ ಏಷ್ಯನ್ ಗೇಮ್ಸ್‌ಗೆ ಆತಿಥ್ಯ ವಹಿಸಿತು. ಕ್ರೀಡಾ ಕ್ಷೇತ್ರದಲ್ಲಿ ಚೀನಾ ಏಳಿಗೆ ಕಾಣಲು ಈ ಕ್ರೀಡಾಕೂಟ ನೆರವಾಯಿತು. 36 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 183 ಚಿನ್ನದೊಂದಿಗೆ ಒಟ್ಟು 341 ಪದಕಗಳನ್ನು ಗೆದ್ದ ಚೀನಾ ಅಗ್ರಸ್ಥಾನ ಪಡೆಯಿತು. 2ನೇ ಸ್ಥಾನ ಪಡೆದ ದ.ಕೊರಿಯಾ ಗೆದ್ದಿದ್ದು 181 ಪದಕಗಳನ್ನು. ಕೇವಲ 1 ಚಿನ್ನದೊಂದಿಗೆ 23 ಪದಕ ಗೆದ್ದ ಭಾರತ 11ನೇ ಸ್ಥಾನ ಗಳಿಸಿತು.

1994 - ಹಿರೋಶಿಮಾ
ಜಪಾನ್‌ನ ಹಿರೋಶಿಮಾ 1994ರಲ್ಲಿ ನಡೆದ 12ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ಆತಿಥ್ಯ ವಹಿಸಿತು. 42 ರಾಷ್ಟ್ರಗಳ ಒಟ್ಟು 6828 ಕ್ರೀಡಾಪಟುಗಳು ಕಣಕ್ಕಿಳಿದಿದ್ದರು. 126 ಚಿನ್ನ, 83 ಬೆಳ್ಳಿ, 57
ಕಂಚಿನೊಂದಿಗೆ ಒಟ್ಟು 266 ಪದಕ ಗೆದ್ದ ಚೀನಾ, ಅಗ್ರಸ್ಥಾನ ಪಡೆದರೆ, 218 ಪದಕ ಗೆದ್ದ ಜಪಾನ್ 2ನೇ ಸ್ಥಾನ ಗಳಿಸಿತು. 183 ಪದಕಗಳೊಂದಿಗೆ ದ.ಕೊರಿಯಾ 3ನೇ ಸ್ಥಾನ ಪಡೆದುಕೊಂಡಿತು. 4
ಚಿನ್ನ, 3 ಬೆಳ್ಳಿ, 16 ಕಂಚಿನೊಂದಿಗೆ ಒಟ್ಟು 23 ಪದಕ ಜಯಿಸಿದ ಭಾರತ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.