16 ದಿನಗಳ ಕಾಲ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ತೆರೆಬಿದ್ದಿದೆ. ಅದ್ಧೂರಿ ಸಮಾರೋಪ ಸಮಾರಂಭ ನೆರದಿದ್ದವರನ್ನ ಕುಣಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರೋಪ ಸಮಾರಂಭದ ಕಳೆ ಹೆಚ್ಚಿಸಿದೆ. ಇಲ್ಲಿದೆ ಸಮಾರೋಪ ಸಮಾರಂಭದ ಹೈಲೈಟ್ಸ್.

ಜಕಾರ್ತ(ಸೆ.03): 16 ದಿನಗಳವರೆಗೆ ಇಂಡೋನೇಷ್ಯಾದ ಜಕಾರ್ತ ಹಾಗೂ ಪಾಲೆಂಬಾಂಗ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತು. ಅದ್ದೂರಿ ಸಮಾರಂಭಕ್ಕೆ ಮಳೆ ಅಡಚಣೆಯನ್ನುಂಟು ಮಾಡಿತು. ಮಳೆಯ ನಡುವೆಯೂ ಕಾರ್ಯಕ್ರಮಗಳು ನೆರವೇರಿದವು. 

70,000 ಆಸನಗಳ ವ್ಯವಸ್ಥೆ ಹೊಂದಿರುವ ಗೆಲೋರಾ ಬಂಗ್ ಕರ್ನೋ ಕ್ರೀಡಾಂಗಣದಲ್ಲಿ ಸಮಾರೋಪ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮನಮೋಹಕ ಹಾಡು, ಕುಣಿತ ಹಾಗೂ ಪಟಾಕಿ ಎಲ್ಲರ ಮನಸೂರೆಗೊಂಡಿತು. ಸುಮಾರು 2 ತಾಸು ಸಾಂಸ್ಕೃತಿಕಚಟುವಟಿಕೆಗಳು ನಡೆದವು.

Scroll to load tweet…

Scroll to load tweet…

ಗಾಯಕರಾದ ಸಿದ್ಧಾರ್ಥ್ ಸ್ಲೇಥಿಯಾ ಮತ್ತು ದೆನಾಡಾ ಅವರು ಬಾಲಿವುಡ್‌ನ ಕೊಯಿ ಮಿಲ್ ಗಯಾ, ಕುಚ್‌ಕುಚ್ ಹೋತಾ ಹೈ ಮತ್ತು ಜೈ ಹೋ.. ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಕ್ರೀಡಾಕೂಟ ದಲ್ಲಿ 45 ದೇಶಗಳಿಂದ ಒಟ್ಟು 11 ಸಾವಿರ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. 

ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಧ್ವಜಧಾರಿಯಾಗಿ ಸಮಾರೋಪ ಸಮಾರಂಭದಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 2022ರ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ ಜೌನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಹ್ಯಾಂಗ್‌ಜೌ ನಗರದ ಮೇಯರ್ ಕ್ಸು ಲಿ ಯೀ ಅವರಿಗೆ ಧ್ವಜವನ್ನು ಹಸ್ತಾಂತರಿಸಲಾಯಿತು.

ರಾಣಿ ರಾಂಪಾಲ್ ಕೃತಜ್ಞತೆ:  ಏಷ್ಯನ್ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿ ಭಾರತ ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ
ಭಾರತ ಒಲಿಂಪಿಕ್ಸ್ ಮತ್ತು ಹಾಕಿ ಸಂಸ್ಥೆಗೆ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಟ್ವೀಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. 

23 ವರ್ಷದ ರಾಣಿ ತಮ್ಮ ಟ್ವೀಟರ್ ಖಾತೆಯಲ್ಲಿ, ‘ಏಷ್ಯಾಡ್ ಸಮಾರೋಪದಲ್ಲಿ ಧ್ವಜಧಾರಿಯಾಗಲು ಅವಕಾಶ ಸಿಕ್ಕಿರುವುದಕ್ಕೆ ಬಹಳಷ್ಟು ಹೆಮ್ಮೆಯಾಗುತ್ತಿದೆ. ಭಾರತ ತಂಡವನ್ನು ಮುನ್ನಡೆಸುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಅವಕಾಶ ನೀಡಿದ ಭಾರತ ಒಲಿಂಪಿಕ್ಸ್ ಮತ್ತು ಹಾಕಿ ಸಂಸ್ಥೆಗೆ ಧನ್ಯವಾದ’ ಎಂದಿದ್ದಾರೆ. ಸುಮಾರು 20 ವರ್ಷಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ ಏಷ್ಯಾಡ್‌ನಲ್ಲಿ ಫೈನಲ್‌ಗೇರಿತ್ತು. ಆದರೆ ಜಪಾನ್ ಎದುರು ಸೋತು ಬೆಳ್ಳಿಗೆ ತೃಪ್ತಿಪಟ್ಟಿತ್ತು