ದುಬೈ(ಸೆ.28): ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಎಂ.ಎಸ್ ಧೋನಿ ಹಲವು ದಾಖಲೆ ಬರೆದಿದ್ದಾರೆ. ಮಿಂಚಿನ ಸ್ಟಂಪಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ 800 ಬ್ಯಾಟ್ಸ್‌ಮನ್‌ಗಳನ್ನ ಔಟ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಏಷ್ಯಾಕಪ್ ಟೂರ್ನಿಯಲ್ಲಿ 11 ಸ್ಟಂಪ್ ಔಟ್ ಮಾಡೋ ಮೂಲಕ ಎಂ.ಎಸ್ ಧೋನಿ ಗರಿಷ್ಠ ಸ್ಟಂಪ್ ಔಟ್ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಶ್ರೀಲಂಕಾದ ಕುಮಾರ ಸಂಗಕ್ಕಾರ 9 ಸ್ಟಂಪ್ ಔಟ್ ಸಾಧನೆ ಮಾಡಿದ್ದರು. 2016ರ ಟಿ20 ಏಷ್ಯಾಕಪ್ ಸೇರಿದಂತೆ ಒಟ್ಟು ಟೂರ್ನಿಯಲ್ಲಿ 12 ಸ್ಟಂಪ್ ಔಟ್ ಮಾಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಧೋನಿ ಒಟ್ಟು 36 ಬ್ಯಾಟ್ಸ್‌ಮನ್‌ಗಳನ್ನ ಬಲಿಪಡೆದಿದ್ದಾರೆ. ಇದರಲ್ಲಿ 11 ಸ್ಟಂಪ್ ಔಟ್ ಹಾಗೂ 25 ಕ್ಯಾಚ್‌ಗಳು ಸೇರಿವೆ. ಈ ಮೂಲಕ ಗರಿಷ್ಠ ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್ ಕಳುಹಿಸಿದ ವಿಕೆಟ್ ಕೀಪರ್‌ಗಳ ಪೈಕಿ ಕುಮಾರ ಸಂಗಕ್ಕಾರ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಶ್ರಫೆ ಮೊರ್ತಝಾ ಸ್ಟಂಪ್ ಮಾಡಿದ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 800 ಔಟ್ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕೀಪರ್ ಹಾಗೂ ವಿಶ್ವದ 3ನೇ ವಿಕೆಟ್ ಕೀಪರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಸೌತ್ಆಫ್ರಿಕಾದ ಮಾರ್ಕ್ ಬೌಶರ್ ಒಟ್ಟು 998, ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ 905 ಔಟ್ ಮಾಡಿದ್ದಾರೆ.