ಕೊಲ್ಕತ್ತಾ(ಅ.02): ಆರ್​​. ಅಶ್ವಿನ್​​ ಟೆಸ್ಟ್​​​ನಲ್ಲಿ ಕಮಾಲ್​​ ಮಾಡ್ತಿದ್ದಾರೆ. ಒಂದರ ಹಿಂದೆ ಒಂದು ದಾಖಲೆಯನ್ನು ನಿರ್ಮಿಸ್ತಿದ್ದಾರೆ. ಮೊದಲ ಟೆಸ್ಟ್​​ನಲ್ಲಿ ವಿಶ್ವದಾಖಲೆಯ 2ನೇ ವೇಗದ ​​200 ವಿಕೆಟ್​ ಟೇಕರ್​​ ಎನಿಸಿಕೊಂಡಿದರು. ಇದೀಗ ಮತ್ತೊಂದು ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ.

ಆರ್​​. ಅಶ್ವಿನ್​​​ ಟೆಸ್ಟ್​​​ ಕ್ರಿಕೆಟ್​​ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡ್ತಿದ್ದಾರೆ. ಈತನ ಸ್ಪಿನ್​​ ಮೋಡಿಗೆ ಇಡೀ ವಿಶ್ವ ಕ್ರಿಕೆಟ್​​ ಲೋಕವೇ ನಿಬ್ಬೆರಗಾಗಿದೆ. ಇಂತಹ ಆಟಗಾರ ಇದೀಗ 2ನೇ ಟೆಸ್ಟ್​​ನಲ್ಲಿ ಮತ್ತೊಂದು ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 

200 ವಿಕೆಟ್​​​.. 1500 ರನ್​​​.. 
ಟೆಸ್ಟ್​​ ಕ್ರಿಕೆಟ್​​​ನಲ್ಲಿ ಆಲ್​​ರೌಂಡರ್​​ಗಳು ಮಿಂಚಿರೋದು ತುಂಬಾನೇ ಅಪರೂಪ. ಅದರಲ್ಲೂ ಬೌಲಿಂಗ್​​ ಹಾಗೂ ಬ್ಯಾಟಿಂಗ್​​ ಎರಡರಲ್ಲೂ ಉತ್ತಮ ಅಂಕಿ ಅಂಶಗಳನ್ನು ಹೊಂದಿರೋ ಆಟಗಾರರು ಇಲ್ಲವೇ ಇಲ್ಲ ಅಂತಾನೇ ಹೇಳಬಹುದು. ಹೀಗಿರುವಾಗ ಅಶ್ವಿನ್​​​ ಮಾತ್ರ ಎರಡರಲ್ಲಿಯೂ ಮಿಂಚ್ತಿದ್ದಾರೆ. ಆ ಮೂಲಕ ವಿಶ್ವದ ನಂಬರ್​​ 1 ಆಲ್​​ರೌಂಡರ್​ ಅನ್ನೋದನ್ನು ಪ್ರೂವ್​​ ಮಾಡ್ತಿದ್ದಾರೆ. 

ಮೊದಲ ಟೆಸ್ಟ್​​ನಲ್ಲಿ 200 ವಿಕೆಟ್​​ ಸಾಧನೆ ಮಾಡಿದ್ದ ಅವರು, ಇದೀಗ ಕಿವೀಸ್​​ ವಿರುದ್ಧದ 2ನೇ ಟೆಸ್ಟ್​​​ನಲ್ಲಿ 1500 ರನ್​​ ಪೂರೈಸಿದ್ದಾರೆ. ಹೌದು, ಅಶ್ವಿನ್​​ ಮೊದಲ ಇನ್ನಿಂಗ್ಸ್​​ನಲ್ಲಿ 21 ರನ್​​ ಮಾಡ್ತಿದ್ದಾಗಿಯೇ ಟೆಸ್ಟ್​​ ಮಾದರಿಯಲ್ಲಿ 1500 ರನ್​​ ಹಾಗೂ 200 ವಿಕೆಟ್​​​ ಪೂರೈಸಿದ ಕೆಲವೇ ಕೆಲ ಆಲ್​​ರೌಂಡರ್​​ಗಳ ಪಟ್ಟಿಗೆ ಸೇರಿಕೊಂಡರು. 

ವಿಶ್ವದಾಖಲೆಯ ವೇಗದ ಸಾಧನೆ 
ಇನ್ನು ಅಶ್ವಿನ್​​​​​ 200 ವಿಕೆಟ್​​ ಹಾಗೂ 1500 ರನ್​ ಸಾಧನೆ ವಿಶ್ವದಾಖಲೆಯ ವೇಗದ ಹಾದಿಯಾಗಿದೆ. ಹೌದು, ಅಶ್ವಿನ್​​ ಇದಕ್ಕಾಗಿ ತೆಗೆದ್ಕೊಂಡಿರೋದು ಕೇವಲ 38 ಟೆಸ್ಟ್​​​ಗಳನ್ನು ಮಾತ್ರ. ಇದಕ್ಕೂ ಮೊದಲು ಈ ದಾಖಲೆ ಇಯಾನ್​ ಬೋಥಮ್​​ ಹೆಸರಲ್ಲಿತ್ತು. 41 ಟೆಸ್ಟ್​​ಗಳಲ್ಲಿ ಭೋಥಮ್​​ 200 ವಿಕೆಟ್​​ ಜೊತೆಗೆ 1500ರನ್​ ಪೂರೈಸಿದ್ರು. ಆದ್ರೀಗ ಅಶ್ವಿನ್​​​ ಕೇವಲ 38 ಟೆಸ್ಟ್​​ಗಳಲ್ಲಿಯೇ ಈ ಸಾಧನೆ ಮಾಡಿದ್ದು, ಅಪರೂಪದ ದಾಖಲೆಯೊಂದನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಟೆಸ್ಟ್​​ ವೃತ್ತಿ ಬದುಕಿನಲ್ಲಿ ಅಶ್ವಿನ್​​ ಸಾಧನೆ ಹೀಗಿದೆ. 38 ಟೆಸ್ಟ್​​​ಗಳಿಂದ 203 ವಿಕೆಟ್​​ ಪಡೆದಿರೋ ಅವರು, 1505 ರನ್​​ ಮಾಡಿದ್ದಾರೆ. 19 ಸಲ 5 ವಿಕೆಟ್​​ ಸಾಧನೆ ಜೊತೆಗೆ 5 ಸಲ 10 ವಿಕೆಟ್​​ ಪಡ್ಕೊಂಡಿದ್ದಾರೆ. 

ಅಶ್ವಿನ್​​​ ಇದೇ ಲಯದಲ್ಲಿ ಪ್ರದರ್ಶನ ನೀಡ್ತಿದ್ರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಮುರಿಯುವುದರಲ್ಲಿ ಡೌಟಿಲ್ಲ. ಅಲ್ದೆ, ವಿಶ್ವ ಕಂಡ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ತಾವೂ ಒಬ್ಬರಾಗಲಿದ್ದಾರೆ.