ಲಂಡನ್‌(ಆ.17): ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ನಡುವಿನ ಆ್ಯಷಸ್‌ ಸರಣಿಯ 2ನೇ ಟೆಸ್ಟ್‌ಗೆ ಮಳೆ ಕಾಟ ಮುಂದುವರಿದಿದೆ. ಮೊದಲ ದಿನ ಮಳೆಗೆ ಬಲಿಯಾದ ಬಳಿಕ, 2ನೇ ದಿನ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದ ಆಸೀಸ್‌, ಇಂಗ್ಲೆಂಡ್‌ ಅನ್ನು ಮೊದಲ ಇನ್ನಿಂಗ್ಸ್‌ನಲ್ಲಿ 258 ರನ್‌ಗೆ ಆಲೌಟ್‌ ಮಾಡಿತ್ತು. 

ಆ್ಯಷಸ್ ಕದನ: ಆಸೀಸ್ ದಾಳಿಗೆ ಇಂಗ್ಲೆಂಡ್ ಸರ್ವಪತನ..!

2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 38 ರನ್‌ ಗಳಿಸಿದ್ದ ಆಸೀಸ್‌, 3ನೇ ದಿನವಾದ ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿ, ಭೋಜನ ವಿರಾಮದ ವೇಳೆಗೆ 4 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿತು. ಬ್ಯಾನ್‌ಕ್ರಾಫ್ಟ್‌ (13), ಖವಾಜ (36), ಟ್ರಾವಿಡ್‌ ಹೆಡ್‌ (07) ವಿಕೆಟ್‌ ಕಳೆದುಕೊಂಡರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಟೀವ್‌ ಸ್ಮಿತ್‌ 40 ಎಸೆತಗಳಲ್ಲಿ 13 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಭೋಜನ ವಿರಾಮದ ವೇಳೆ ಶುರುವಾದ ಮಳೆ ಸಂಜೆಯಾದರೂ ನಿಲ್ಲದ ಕಾರಣ, ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಆಸ್ಪ್ರೇಲಿಯಾ 80 ರನ್‌ ಗಳಿಸಿದ್ದು, ಇನ್ನೂ 178 ರನ್‌ ಹಿನ್ನಡೆಯಲ್ಲಿದೆ.

5 ಪಂದ್ಯಗಳ ಆ್ಯಷಸ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ತಂಡವು ಅನಾಯಾಸವಾಗಿ ಜಯಿಸುವುದರೊಂದಿಗೆ 1-0 ಮುನ್ನಡೆ ಸಾಧಿಸಿದೆ. ಇದೀಗ ಲಾರ್ಡ್ಸ್’ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಆತಿಥೇಯ ಇಂಗ್ಲೆಂಡ್ ಸಿಲುಕಿದೆ.

ಸ್ಕೋರ್‌: ಇಂಗ್ಲೆಂಡ್‌ 258, ಆಸ್ಪ್ರೇಲಿಯಾ (3ನೇ ದಿನದಂತ್ಯಕ್ಕೆ) 80/4